ಬಿಜೆಪಿಯ ʼವಾಷಿಂಗ್‌ ಮಷೀನ್ʼ ಈಗ ಸಂಪೂರ್ಣ ಆಟೋಮ್ಯಾಟಿಕ್‌ ಆಗಿದೆ- ಬಿಜೆಪಿ ಸೇರಿ, ಕೇಸ್‌ ಮುಚ್ಚುತ್ತದೆ: ಕಾಂಗ್ರೆಸ್ ವ್ಯಂಗ್ಯ

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣಗಳನ್ನು ಬಿಜೆಪಿ ಸರ್ಕಾರ ನಿಭಾಯಿಸುತ್ತಿರುವ ರೀತಿಯನ್ನು ತೀಕ್ಷ್ಣವಾಗಿ ಟೀಕಿಸಿರುವ ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, ಬಿಜೆಪಿ ಅಥವಾ ಅದರ ಮಿತ್ರ ಪಕ್ಷವನ್ನು ಸೇರುವವರ ಕೇಸುಗಳನ್ನು ವಜಾಗೊಳಿಸುವ “ಸಂಪೂರ್ಣ ಆಟೋಮ್ಯಾಟಿಕ್‌ ಮಷೀನ್ ಬಿಜೆಪಿ ಆಗಿದೆ”‌ ಎಂದು ಆಡಳಿತ ಪಕ್ಷವನ್ನು ಬಣ್ಣಿಸಿದ್ದಾರೆ

ಎನ್‌ಸಿಪಿ ತೊರೆದು ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಕೂಟವನ್ನು ಸೇರಿದ ಪ್ರಫುಲ್‌ ಪಟೇಲ್‌ ಅವರ ಪ್ರಕರಣವನ್ನು ಖೇರಾ ಎತ್ತಿ ತೋರಿಸಿದ್ದಾರೆ. ಪಟೇಲ್‌ ವಿರುದ್ಧ 2017ರಲ್ಲಿ ದಾಖಲಿಸಲಾಗಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ ಮುಕ್ತಾಯ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.

ಪಟೇಲ್‌ ಅವರು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ನಾಗರಿಕ ವಾಯುಯಾನ ಸಚಿವರಾಗಿದ್ದಾಗ ಏರ್‌ ಇಂಡಿಯಾಗೆ ವಿಮಾನಗಳನ್ನು ಲೀಸ್‌ ಮಾಡಿದ್ದಕ್ಕೆ ಸಂಬಂಧಿಸಿದ ಹಗರಣದಲ್ಲಿ ಅವರನ್ನು ಆರೋಪಿಯನ್ನಾಗಿಸಲಾಗಿತ್ತು.

ಮುಂಬೈ ಸ್ಫೋಟ ಪ್ರಕರಣದ ಆರೋಪಿ ಇಕ್ಬಾಲ್‌ ಮಿರ್ಚಿಯೊಂದಿಗೆ ಪಟೇಲ್‌ ನಡೆಸಿದ್ದರೆನ್ನಲಾದ ಆಸ್ತಿ ವ್ಯವಹಾರಗಳ ಕುರಿತಂತೆ ಬಿಜೆಪಿ 2019ರಲ್ಲಿ ಮಾಡಿರುವ ಆರೋಪಗಳನ್ನೂ ಖೇರಾ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ ಹಾಗೂ ಇತ್ತೀಚೆಗೆ ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರ ಏನಾಗಿದೆ ಎಂದು ಖೇರಾ ಪ್ರಶ್ನಿಸಿದ್ದಾರೆ.

ಬಿಜೆಪಿ ಅಥವಾ ಅದರ ಮಿತ್ರ ಪಕ್ಷಗಳನ್ನು ಸೇರಿದ ನಂತರ ಭ್ರಷ್ಟಾಚಾರ ಪ್ರಕರಣಗಳಿಂದ ಮುಕ್ತರಾದ ಹಿಮಂತ ಬಿಸ್ವ ಶರ್ಮ, ನಾರಾಯಣ ರಾಣೆ, ಅಜಿತ್‌ ಪವಾರ್‌, ಹಸನ್‌ ಮುಶ್ರಿಫ್‌, ಛಗನ್‌ ಭುಜಬಲ್‌, ಅಶೋಕ್‌ ಚವಾಣ್‌ ಅವರ ಹೆಸರುಗಳನ್ನೂ ಖೇರಾ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಿಜೆಪಿಯು ಇಡಿ, ಐಟಿ ಮತ್ತು ಸಿಬಿಐನಂತಹ ಸಂಸ್ಥೆಗಳನ್ನು ಅಸ್ತ್ರವಾಗಿಸಿದೆ ಎಂದು ಅವರು ಆರೋಪಿಸಿದರು.

“ತನ್ನ ರಾಜಕೀಯ ವ್ಯಾಪ್ತಿಯನ್ನು ವಿಸ್ತರಿಸಲು ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸ ಬೇಕಾಗಿರುವ ಇಡಿ, ಐಟಿ ಮತ್ತು ಸಿಬಿಐ ಅನ್ನು ಮೋದಿ ಸರ್ಕಾರ ಅಸ್ತ್ರವನ್ನಾಗಿಸಿದೆ,” ಎಂದು ಹೇಳಿದ ಖೇರಾ, ಚುನಾವಣಾ ಬಾಂಡ್‌ಗಳನ್ನು ಪಡೆಯುವ ಉದ್ದೇಶದೊಂದಿಗೆ ಇಡಿ ದುರ್ಬಳಕೆ ಹಾಗೂ 30 ವರ್ಷಗಳಷ್ಟು ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳಿಗೆ ನೋಟಿಸ್‌ ಜಾರಿಗೊಳಿಸಲು ಐಟಿ ಇಲಾಖೆ ಬಳಸುತ್ತಿರುವ ದೃಷ್ಟಾಂತಗಳನ್ನು ಅವರು ಉಲ್ಲೇಖಿಸಿದ್ದಾರೆ.

ಬಿಜೆಪಿಯ 2014 ಆರೋಪಗಳು ನಿಜವೇ ಅಥವಾ ಕೇವಲ ದೂಷಿಸುವ ಉದ್ದೇಶ ಹೊಂದಿತ್ತೇ, ಬದ್ಧ ನ್ಯಾಯಾಂಗವನ್ನು ಬಿಜೆಪಿ ಬಯಸುತ್ತಿದೆಯೇ ಅಥವಾ ಅದು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಲು ಬಯಸಿದೆಯೇ ಎಂದು ಖೇರಾ ಪ್ರಶ್ನಿಸಿದ್ದಾರೆ.

“ನಾ ಖಾವೂಂಗ, ನಾ ಖಾನೆ ದೂಂಗಾ, ಅಗರ್‌ ಬಿಜೆಪಿ ಜಾಯಿನ್‌ ಕರೋ ತೋ ಕೇಸಸ್‌ ರಫಾ-ದಫಾ ಕರ್‌ ದೂಂಗಾ” ಎಂಬ ಘೋಷಣೆಯೊಂದಿಗೆ ತಮ್ಮ ಹೇಳಿಕೆಯನ್ನು ಖೇರಾ ಅಂತ್ಯಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!