ಕಾಂಗ್ರೆಸ್‌ಗೆ ಮತ್ತೆ ಶಾಕ್ ನೀಡಿದ ಐಟಿ ಇಲಾಖೆ- 1,700 ಕೋಟಿ ರೂ. ಮೊತ್ತದ ಹೊಸ ನೋಟಿಸ್!

ನವದೆಹಲಿ: ಹಿಂದಿನ ವರ್ಷಗಳ ತೆರಿಗೆ ರಿಟರ್ನ್ಸ್‌ನಲ್ಲಿನ ವ್ಯತ್ಯಾಸಗಳಿಗಾಗಿ ಆದಾಯ ತೆರಿಗೆ ಇಲಾಖೆಯು 1,700 ಕೋಟಿ ರೂಪಾಯಿ ಮೊತ್ತದ ಹೊಸ ನೋಟಿಸ್ ಅನ್ನು ಕಾಂಗ್ರೆಸ್‌ಗೆ ರವಾನಿಸಿದ್ದು, ಲೋಕಸಭೆ ಚುನಾವಣೆಗೆ ಮುನ್ನ ಹಣದ ಕೊರತೆಯಿರುವ ಪಕ್ಷಕ್ಕೆ ಮತ್ತೊಂದು ಹೊಡೆತ ನೀಡಿದೆ ಎಂದು ಮೂಲಗಳು ತಿಳಿಸಿವೆ.

2017-18 ರಿಂದ 2020-21 ರವರೆಗಿನ ತೆರಿಗೆ ಬಾಕಿ, ಬಡ್ಡಿ ಮತ್ತು ದಂಡಕ್ಕೆ ಸಂಬಂಧಿಸಿದಂತೆ ಹೊಸದಾಗಿ ಕಾಂಗ್ರೆಸ್‌ಗೆ ಈ ನೋಟಿಸ್ ನೀಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

2018-19ನೇ ಸಾಲಿಗೆ ಸಂಬಂಧಿಸಿದಂತೆ ಐ-ಟಿ ರಿಟರ್ನ್ಸ್ ಸಲ್ಲಿಸದ ಕಾರಣಕ್ಕೆ 201 ಕೋಟಿ ರೂ. ದಂಡ ಪಾವತಿಸಬೇಕು ಎಂದು ನೋಟಿಸ್ ನೀಡಿದ್ದ ಆದಾಯ ತೆರಿಗೆ ಇಲಾಖೆಯು, ಕಾಂಗ್ರೆಸ್ ಪಕ್ಷದ ಒಂಬತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು.

2017 ರಿಂದ 2021ರ ಅವಧಿಯ ತೆರಿಗೆ ಮರುಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆರಂಭಿಸಿದ್ದ ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆಯಿದೆ.

ಆದಾಯ ತೆರಿಗೆ ಇಲಾಖೆಯ ಕ್ರಮದಿಂದಾಗಿ ಪಕ್ಷದ ಎಲ್ಲ ರಾಜಕೀಯ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗಿದೆ. ಏಪ್ರಿಲ್ 19 ರಿಂದ ಪ್ರಾರಂಭವಾಗುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಆರ್ಥಿಕವಾಗಿ ಪಕ್ಷದ ಕತ್ತು ಹಿಸುಕಿದೆ ಮತ್ತು ತೆರಿಗೆ ಅಧಿಕಾರಿಗಳನ್ನು ಪಕ್ಷದ ವಿರುದ್ಧ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Leave a Reply

Your email address will not be published. Required fields are marked *

error: Content is protected !!