ಟೋಲ್‌ಗಳಿಗೆ ವಿದಾಯ : ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭ – ಸಚಿವ ನಿತಿನ್ ಗಡ್ಕರಿ

ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ ಸೇವೆ ಇದ್ದರೂ ಟೋಲ್ ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಟೋಲ್‌ ಗೇಟ್‌ಗಳಲ್ಲಿ ಕಾಯುವ ಪರಿಸ್ಥಿತಿ ಇರುತ್ತಿದೆ. ಇದನ್ನು ತಪ್ಪಿಸಲು ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರು ಹೊಸ ಯೋಜನೆ ರೂಪಿಸಿದ್ದು, ದೇಶದಲ್ಲಿ ಟೋಲ್‌ ಸಂಗ್ರಹಕ್ಕೆ ಟೋಲ್‌ಗೇಟ್‌ಗಳ ಬದಲು, ಸ್ಯಾಟಲೈಟ್‌ ಆಧಾರಿತ ಟೋಲ್‌ ಸಿಸ್ಟಂ ಜಾರಿಗೆ ತರಲು ಮುಂದಾಗಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ‘ನಾವು ಶೀಘ್ರದಲ್ಲಿಯೇ ದೇಶಾದ್ಯಂತ ಸ್ಯಾಟಲೈಟ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೆ ತರುತ್ತೇವೆ. ಹೊಸ ಯೋಜನೆ ಮೂಲಕ ದೇಶದ ಜನ ಎಷ್ಟು ಕಿಲೋಮೀಟರ್‌ವರೆಗೆ ರಸ್ತೆಯನ್ನು ಬಳಸಿರುತ್ತಾರೋ, ಅಷ್ಟು ಕಿ.ಮೀ.ವರೆಗೆ ಮಾತ್ರ ಟೋಲ್‌ ಸಂಗ್ರಹಿಸಲಾಗುತ್ತದೆ. ಜನರ ಬ್ಯಾಂಕ್‌ ಖಾತೆಯಿಂದಲೇ ಹಣ ನೇರವಾಗಿ ಕಡಿತವಾಗುತ್ತದೆ. ಇದರಿಂದ ಸಮಯದ ಜತೆಗೆ ಹಣದ ಉಳಿತಾಯವೂ ಆಗಲಿದೆ” ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು 2021ರಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸಿದ್ದು, ಇದರಿಂದ ಟೋಲ್‌ಗೇಟ್‌ಗಳಲ್ಲಿ ಜನರ ಅರ್ಧ ಸಮಯ ಉಳಿದಿದೆ. ಫಾಸ್ಟ್‌ಟ್ಯಾಗ್‌ನ ಪರಿಚಯವು ಈಗಾಗಲೇ ಟೋಲ್ ಪ್ಲಾಜಾಗಳಲ್ಲಿ ಸರಾಸರಿ ಕಾಯುವ ಸಮಯವನ್ನು 47 ಸೆಕೆಂಡ್‌ಗಳಿಗೆ ಕಡಿಮೆ ಮಾಡಿದ್ದು, ಇದು ಹಿಂದಿನ ಸರಾಸರಿ 714 ಸೆಕೆಂಡುಗಳಿಂದ ಗಮನಾರ್ಹ ಸುಧಾರಣೆಯಾಗಿದೆ. ಈಗ ಹೊಸ ವ್ಯವಸ್ಥೆ ಮೂಲಕ ಮತ್ತೊಂದು ಕ್ರಾಂತಿಗೆ ನಿತಿನ್‌ ಗಡ್ಕರಿ ಸಾಕ್ಷಿಯಾಗಲಿದ್ದಾರೆ.

ಏನಿದು ತಂತ್ರಜ್ಞಾನ?

ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ದೇಶಿಸಿರುವ ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ, ವಾಹನಗಳಿಗೆ ಜಿಪಿಎಸ್‌ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಜಿಪಿಎಸ್‌ ಯಂತ್ರವು ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದರಿಂದಾಗಿ ನಮ್ಮ ವಾಹನವು ಯಾವ ಟೋಲ್‌ ರಸ್ತೆಗೆ ಪ್ರವೇಶ ಪಡೆದಿದೆ, ಯಾವ ರಸ್ತೆಯಿಂದ ನಿರ್ಗಮಿಸಿದೆ ಎಂಬುದನ್ನು ಲೆಕ್ಕ ಹಾಕಿ, ಬ್ಯಾಂಕ್‌ ಖಾತೆಯಿಂದ ಟೋಲ್‌ ಕಡಿತಗೊಳಿಸುತ್ತದೆ.

ವಾಹನ ಸವಾರರಿಗೆ ಉಪಯೋಗ ಹೇಗೆ?

ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು ಜಾರಿಗೆ ಬಂದರೆ, ಭಾರತದಲ್ಲಿ ಸಮಯದ ಜತೆಗೆ ಹಣವನ್ನೂ ಉಳಿತಾಯ ಮಾಡಬಹುದಾಗಿದೆ. ಟೋಲ್‌ ಸಂಗ್ರಹ ಇರುವ ಹೆದ್ದಾರಿಯಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಟೋಲ್‌ ಶುಲ್ಕ ಪಾವತಿಸುತ್ತೇವೆ. ಟೋಲ್‌ ಗೇಟ್‌ ನಂತರ ಅರ್ಧ ಕಿಲೋಮೀಟರ್‌ ಇದ್ದರೂ, ಪೂರ್ತಿ ಹಣವನ್ನು ನಾವೀಗ ಪಾವತಿಸಬೇಕಾಗುತ್ತಿದೆ. ಆದರೆ, ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೆ ಬಂದರೆ, ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಹಣ ಪಾವತಿಸುತ್ತೇವೆ ಎಂದು ನಿತಿನ್ ಗಡ್ಕರಿ ಹೇಳಿದರು.

ಅಮೆರಿಕಕ್ಕೆ ಭಾರತ ಸಡ್ಡು

2024 ರ ಅಂತ್ಯದ ವೇಳೆಗೆ ಭಾರತದ ರಸ್ತೆ ಸಂಪರ್ಕ ಜಾಲವನ್ನುಅಮೆರಿಕಕ್ಕೆ ಸರಿ ಸಮನಾಗಿ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ನಿತಿನ್ ಗಡ್ಕರಿ, ಈ ವರ್ಷದ ಅಂತ್ಯದ ವೇಳೆಗೆ ಭಾರತದ ಭವಿಷ್ಯವು ಬದಲಾಗಲಿದೆ. ಈ ಕಠಿಣ ಕಾರ್ಯವನ್ನು ಸಾಧಿಸುವಲ್ಲಿ ನಾವು “ಖಂಡಿತವಾಗಿಯೂ ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತಮಾಲಾ-2 ಯೋಜನೆ

ಇದೇ ವೇಳೆ ಭಾರತಮಾಲಾ-2 ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದ ಸಚಿವರು, ಸುಮಾರು 26,000 ಕಿಮೀ ಆರ್ಥಿಕ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಭಾರತಮಾಲಾ ಪರಿಯೋಜನಾ ಯೋಜನೆ ಮತ್ತು ಹೆಚ್ಚಿನ ಸರಕು ಸಾಗಣೆಯನ್ನು ನಿರ್ವಹಿಸುವಲ್ಲಿ ಗೋಲ್ಡನ್ ಕ್ವಾಡ್ರಿಲ್ಯಾಟರಲ್ (GQ) ಮತ್ತು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ (NS-EW) ಕಾರಿಡಾರ್‌ಗಳ ಜೊತೆಗೆ ಅದರ ಪ್ರಾಮುಖ್ಯತೆಯನ್ನು ಗಡ್ಕರಿ ಚರ್ಚಿಸಿದರು.

ಭಾರತ್ ಮಾಲಾ-1 34,000 ಕಿಮೀ ಒಳಗೊಂಡಿತ್ತು. ಅಂತೆಯೇ ಭಾರತ್ ಮಾಲಾ-2 ಸುಮಾರು 8,500 ಕಿಮೀ ದೂರವನ್ನು ಒಳಗೊಂಡಿರಲಿದೆ. ಹಲವು ಯೋಜನೆಗಳಿಗೆ ಮಂಜೂರಾತಿ ದೊರೆತಿದ್ದು, ಹಲವು ಕಾಮಗಾರಿಗಳು ನಡೆಯಬೇಕಿದೆ. 2011 ರಿಂದ 2023 ರವರೆಗಿನ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಾಣ ಮತ್ತು ವಿಸ್ತರಣೆ ಚಟುವಟಿಕೆಗಳಲ್ಲಿ ಶೇ.10% ಹೆಚ್ಚಳವಾಗಿದೆ ಎಂದು ಗಡ್ಕರಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!