ಶಿವಸೇನೆಯ 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ಅನಂತ್ ಗೀತೆ, ಸಾವಂತ್‌ಗೆ ಟಿಕೆಟ್

ಮುಂಬೈ: ಮುಂಬರುವ ಲೋಕಸಭೆ ಚುನಾವಣೆಗೆ ಶಿವಸೇನೆ(ಯುಬಿಟಿ) ತನ್ನ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಮಾಜಿ ಕೇಂದ್ರ ಸಚಿವರಾದ ಅನಂತ್ ಗೀತೆ ಮತ್ತು ಅರವಿಂದ್ ಸಾವಂತ್ ಅವರನ್ನು ಕ್ರಮವಾಗಿ ರಾಯಗಡ ಮತ್ತು ದಕ್ಷಿಣ ಮುಂಬೈ ಕ್ಷೇತ್ರಗಳಿಂದ ಕಣಕ್ಕಿಳಿಸಲಾಗಿದೆ.

2022 ರಲ್ಲಿ ಶಿವಸೇನೆ ವಿಭಜನೆಯಾದ ನಂತರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಉಳಿದುಕೊಂಡಿದ್ದ ಎಲ್ಲಾ ಐದು ಹಾಲಿ ಸಂಸದರಿಗೆ ಪಕ್ಷ ಮತ್ತೆ ಟಿಕೆಟ್ ನೀಡಿದೆ. ಹಾಲಿ ಸಂಸದರಾದ ಅರವಿಂದ್ ಸಾವಂತ್(ದಕ್ಷಿಣ ಮುಂಬೈ), ರಾಜನ್ ವಿಚಾರೆ(ಥಾಣೆ), ವಿನಾಯಕ್ ರಾವತ್(ರತ್ನಗಿರಿ-ಸಿಂಧುದುರ್ಗ), ಓಂರಾಜೆ ನಿಂಬಾಳ್ಕರ್ (ಧಾರಶಿವ್) ಮತ್ತು ಸಂಜಯ್ ಜಾಧವ್(ಪರ್ಭಾನಿ) ಅವರು ಮತ್ತೆ ಟಿಕೆಟ್ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಅವಿಭಜಿತ ಶಿವಸೇನೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತೊರೆದ ನಂತರ ಸಾವಂತ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವಿಚಾರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತವರು ನೆಲವಾದ ಥಾಣೆಯನ್ನು ಪ್ರತಿನಿಧಿಸುತ್ತಿದ್ದಾರೆ. ಶಿಂಧೆ ಬಂಡಾಯದಿಂದ 1966 ರಲ್ಲಿ ಬಾಳ್ ಠಾಕ್ರೆ ಸ್ಥಾಪಿಸಿದ ಶಿವಸೇನೆ ಇಬ್ಭಾಗವಾಯಿತು.

ಶಿವಸೇನೆ(ಯುಬಿಟಿ), ಛತ್ರಪತಿ ಸಂಭಾಜಿನಗರದಿಂದ ಪಕ್ಷದ ಹಿರಿಯ ನಾಯಕ ಚಂದ್ರಕಾಂತ್ ಖೈರೆ ಅವರನ್ನು ಕಣಕ್ಕಿಳಿಸಿದೆ. ಖೈರೆ ಅವರು 2019 ರಲ್ಲಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಅಭ್ಯರ್ಥಿ ಇಮ್ತಿಯಾಜ್ ಜಲೀಲ್ ವಿರುದ್ಧ ಸೋತಿದ್ದರು. ಮುಂಬೈ ಈಶಾನ್ಯದಿಂದ, ಮಾಜಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಶಾಸಕ ಮತ್ತು ನಂತರ ಶಿವಸೇನೆಗೆ ಸೇರ್ಪಡೆಗೊಂಡ ಸಂಸದ ಸಂಜಯ್ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ.

Leave a Reply

Your email address will not be published. Required fields are marked *

error: Content is protected !!