ತಮಿಳಿನಲ್ಲಿ ಸದ್ದು ಮಾಡಲಿರುವ ಬಿಗ್ ಬಾಸ್ ರೂಪೇಶ್‌ ಶೆಟ್ಟಿ

ಮಂಗಳೂರು: ಖ್ಯಾತ ತಮಿಳು ಹಾಸ್ಯ ನಟ ಯೋಗಿಬಾಬು ಜತೆಗೆ ನಟಿಸಲಿರುವ ನಮ್ಮೂರಿನ ಬಿಗ್‌ಬಾಸ್‌ ವಿನ್ನರ್‌ ನಮ್ಮ ಕರಾವಳಿಯ ರೂಪೇಶ್‌ ಶೆಟ್ಟಿ ಗಡಿ ದಾಟಿ ಹೋಗಿ ಸಿನೆಮಾ ರಂಗದಲ್ಲಿ ಸಾಧನೆ ಮಾಡುತ್ತಿದ್ದು, ಅದಕ್ಕೆ ಈಗ ಅವರು ತಮಿಳಿನಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವುದು ಹೊಸ ಸೇರ್ಪಡೆ.

ಬಿಗ್‌ ಬಾಸ್‌ ವಿನ್ನರ್‌ ಆದ ಬಳಿಕ ಅವರ ವೃತ್ತಿ ಜೀವನ ಮತ್ತೊಂದು ಎತ್ತರಕ್ಕೆ ಹೋಗಿದೆ. ಅದಕ್ಕೂ ಮೊದಲು ಅವರು ಮಾಡಿರುವ ಸಾಧನೆ, ಗಳಿಸಿರುವ ಜನಪ್ರಿಯತೆ ಯಿಂದಲೇ ಅವರಿಗೆ ಬಿಗ್‌ಬಾಸ್‌ನಲ್ಲಿ ಅವಕಾಶ ಸಿಕ್ಕಿದ್ದು, ಬಳಿಕ ಬಿಗ್‌ಬಾಸ್‌ ಮನೆಯಲ್ಲಿ ತೋರಿದ್ದ ನಿರ್ವಹಣೆಯಿಂದ ವಿನ್ನರ್‌ ಆದಾಗ ತುಳುನಾಡಿನ ಜತೆಗೆ ಇಡೀ ರಾಜ್ಯವೇ ಸಂಭ್ರಮಿಸಿತ್ತು. ಗಿರಿಗಿಟ್‌, ಗಮ್ಜಾಲ್, ಸರ್ಕಸ್‌ ಮುಂತಾದ ಹಿಟ್‌ ಸಿನಿಮಾಗಳನ್ನು ನೀಡಿರುವ ರೂಪೇಶ್‌ ಶೆಟ್ಟಿ ಸ್ಯಾಂಡಲ್‌ವುಡ್‌ನ ಸುದೀಪ್‌ ಮುಂತಾದ ಫಟಾನುಫಟಿಗಳ ಜತೆಗೆ ಸ್ನೇಹ ಸಂಪಾದಿಸಿದ್ದಾರೆ.

ಬಿಗ್ ಬಾಸ್ ವಿನ್ನರ್ ಆದ ಮೇಲೆ ರೂಪೇಶ್ ಕನ್ನಡದಲ್ಲಿ ಅಭಿನಯಿಸಿದ ಅಧಿಪತ್ರ ಸಿನಿಮಾದ ಚಿತ್ರೀಕರಣ ಪೂರೈಸಿದೆ. ಅವರು ಕನ್ನಡದಲ್ಲಿ ಅಭಿನಯಿಸಿದ “ಮಂಕುಭಾಯ್ ಫಾಕ್ಸಿರಾಣಿ” ಯಶಸ್ಸನ್ನು ಕಂಡಿದೆ. ಅಲ್ಲದೆ ಮಲಯಾಳಂನ‌ ಖ್ಯಾತ ನಟಿ ಭಾವನಾ ಜೊತೆ ನಟಿಸಿದ “ಗೋವಿಂದಾ ಗೋವಿಂದಾ” ಸಿನಿಮಾ ಕೂಡಾ ಗೆಲುವನ್ನು ಕಂಡಿದೆ. ಈಗ ತಮಿಳಿನ ಖ್ಯಾತ ನಟ ಯೋಗಿಬಾಬು ಅವರೊಂದಿಗೆ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಸನ್ನಿಧಾನಂ ಪಿ ಒ ಎಂಬ ಸಿನಿಮಾದಲ್ಲಿ ಇವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಅಮುತಸಾರಥಿ ಅವರು ನಿರ್ದೇಶಿಸಿದ್ದು, ನಮ್ಮೂರಿನ ಮತ್ತೋರ್ವ ಪ್ರಮುಖ ನಟ ಪ್ರಮೋದ್‌ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಖ್ಯಾತ ಕಾಮಿಡಿ ಹೀರೋ ಆಗಿರುವ ಯೋಗಿಬಾಬು ಜತೆಗೆ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕರಾವಳಿಯ ಸುಂದರ ರೂಪೇಶ್‌ ಶೆಟ್ಟಿ ಅವರು ಈ ಸಿನಿಮಾದ ಮೂಲಕ ತಮಿಳರ ಮನ ಗೆಲ್ಲಲು ಹೊರಟಿರುವುದು ನಮಗೆಲ್ಲ ಸಂತೋಷ ಹಾಗೂ ಹೆಮ್ಮೆಯ ಸಂಗತಿ.

ಅದೇ ರೀತಿ ರೂಪೇಶ್ ಹೊಸ ತುಳು ಸಿನಿಮಾದ ಸ್ಕ್ರಿಪ್ಟ್ ರಚನೆಯೂ ನಡೆಯುತ್ತಿದೆ. ಇದರ ಜೊತೆಗೆ ಸ್ಟಾರ್ ಸ್ಪೋಟ್ಸ್ ನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಕಮೆಂಟರಿಯನ್ನು ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಗುಂಡಪ್ಪ ವಿಶ್ವನಾಥ ಜೊತೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರೂಪೇಶ್ ಈಗ ಬಿಝಿ ನಟರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!