ಮಾಸ್ಕೋ ಹಾಲ್ಗೆ ದಾಳಿ: ಮೃತರ ಸಂಖ್ಯೆ 115ಕ್ಕೆ ಏರಿಕೆ, 11ಉಗ್ರರ ಬಂಧನ!
ಮಾಸ್ಕೋ: ಕ್ರೋಕಸ್ ಸಿಟಿ ಹಾಲ್ ಕನ್ಸರ್ಟ್ ಮೇಲಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. ಇನ್ನು ದಾಳಿಯಲ್ಲಿ ನೇರವಾಗಿ ಭಾಗಿಯಾಗಿರುವ ನಾಲ್ವರು ಸೇರಿದಂತೆ ಹನ್ನೊಂದು ಉಗ್ರರನ್ನು ಬಂಧಿಸಲಾಗಿದೆ.
ಶಾಸಕ ಅಲೆಕ್ಸಾಂಡರ್ ಖಿನ್ಸ್ಟೀನ್ ಶನಿವಾರ ಟೆಲಿಗ್ರಾಮ್ನಲ್ಲಿ ಈ ವಿವರವನ್ನು ಪೋಸ್ಟ್ ಮಾಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಭಯೋತ್ಪಾದಕರ ದಾಳಿಯಲ್ಲಿ ಸತ್ತವರ ಸಂಖ್ಯೆ 115 ಆಗಿದ್ದು, 145 ಜನರು ಗಾಯಗೊಂಡಿದ್ದಾರೆ.
ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಬಳಿಕ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಖಿನ್ಸ್ತೀನ್ ಹೇಳಿದ್ದಾರೆ. ಉಳಿದ ಉಗ್ರರು ಕಾಲ್ನಡಿಗೆಯಲ್ಲಿ ಸಮೀಪದ ಅರಣ್ಯಕ್ಕೆ ಪರಾರಿಯಾಗಿದ್ದಾರೆ.
ದಾಳಿಯ ವಿಡಿಯೋ…ಉಗ್ರರ ದಾಳಿಯಿಂದಾಗಿ ಕ್ರೋಕಸ್ ಸಿಟಿ ಹಾಲ್ ನಲ್ಲಿ ಬೆಂಕಿಗಾಹುತಿಯಾಗಿದೆ. ದಟ್ಟವಾದ ಕಪ್ಪು ಹೊಗೆ ಗಾಳಿಯನ್ನು ತುಂಬಿದೆ. ಬೃಹತ್ ಸಭಾಂಗಣದಲ್ಲಿ ಗುಂಡೇಟಿನ ಶಬ್ದದ ನಡುವೆ ಭಯಭೀತರಾದ ಸ್ಥಳೀಯರು ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದು ಗ್ರೆನೇಡ್ ಅಥವಾ ಬೆಂಕಿಯಿಡುವ ಬಾಂಬ್ ಅನ್ನು ಎಸೆದಿದ್ದಾರೆ.
ISIS-K ಭಯೋತ್ಪಾದಕ ಗುಂಪನ್ನು 2015ರಲ್ಲಿ ಪಾಕಿಸ್ತಾನಿ ತಾಲಿಬಾನ್ನ ಅತೃಪ್ತ ಸದಸ್ಯರು ಸ್ಥಾಪಿಸಿದರು. ಈ ಗುಂಪಿನಲ್ಲಿ 2 ಸಾವಿರ ಸೈನಿಕರು ಇದ್ದಾರೆ. ನ್ಯೂಯಾರ್ಕ್ ಮೂಲದ ಭದ್ರತಾ ಸಲಹಾ ಸಂಸ್ಥೆ ಸೌಫಾನ್ ಗ್ರೂಪ್ನ ಭಯೋತ್ಪಾದನಾ ನಿಗ್ರಹ ವಿಶ್ಲೇಷಕ ಕಾಲಿನ್ ಪಿ ಕ್ಲಾರ್ಕ್, ಕಳೆದ ಎರಡು ವರ್ಷಗಳಿಂದ ಐಸಿಸ್-ಕೆ ರಷ್ಯಾವನ್ನು ಗುರಿಯಾಗಿಸಲು ಯೋಜಿಸುತ್ತಿದೆ ಎಂದು ಹೇಳಿದರು. ಸಂಘಟನೆ ತನ್ನ ಪ್ರಚಾರದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ವಿ ಪುಟಿನ್ ಅವರನ್ನು ಆಗಾಗ್ಗೆ ಟೀಕಿಸುತ್ತದೆ.