ಸಿಲ್ಕ್ಯಾರಾ ಸುರಂಗ ನಿರ್ಮಾಣ ಕಂಪನಿಯಿಂದ ಬಿಜೆಪಿಗೆ 55 ಕೋಟಿ ದೇಣಿಗೆ

ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯಾರಾ- ಬಾರಾಕೋಟ್ ಸುರಂಗವನ್ನು ನಿರ್ಮಿಸುತ್ತಿರುವ ಹೈದರಾಬಾದ್ ಮೂಲದ ನವಯುಗ ಎಂಜಿನಿಯರಿಂಗ್ ಕಂಪನಿ (ಎನ್ಇಸಿ) 55 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ, ಇಡೀ ಮೊತ್ತವನ್ನು ಬಿಜೆಪಿಗೆ ದೇಣಿಗೆಯಾಗಿ ನೀಡಿದೆ ಎಂಬ ಅಂಶ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ನಿರ್ಮಾಣ ಹಂತದ ಸುರಂಗಮಾರ್ಗ 2023ರ ನವೆಂಬರ್ 12ರಂದು ಕುಸಿದು 41 ಮಂದಿ ಕಾರ್ಮಿಕರು ಹದಿನಾರು ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದರು.

ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಿಲ್ಕ್ಯಾರಾ- ಬಾರಾಕೋಟ್ ಸುರಂಗ ಯೋಜನೆಗೆ 2018ರಲ್ಲಿ ಒಪ್ಪಿಗೆ ನೀಡಿತ್ತು. ಇದು 2022ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಗಡುವನ್ನು ಆ ಬಳಿಕ ವಿಸ್ತರಿಸಲಾಗಿತ್ತು. 2019ರ ಏಪ್ರಿಲ್ 9 ಮತ್ತು 2022ರ ಅಕ್ಟೋಬರ್ 10ರ ನಡುವೆ ಎನ್ಇಸಿ ತಲಾ ಒಂದು ಕೋಟಿ ರೂ. ಮೌಲ್ಯದ 55 ಚುನಾವಣಾ ಬಾಂಡ್ ಗಳನ್ನು ಖರೀದಿಸಿತ್ತು.

ದೇಶದ ಅತಿ ಉದ್ದದ ಸೇತುವೆಯಾದ ಧೋಲಾ-ಸಾದಿಯಾ ಸೇತುವೆಯನ್ನು ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಈ ಕಂಪನಿ ಕಟ್ಟಿದ್ದು, ಇದರ ಉದ್ದ 9.15 ಕಿ.ಮೀ. ಆಂಧ್ರಪ್ರದೇಶ ಸರ್ಕಾರದ ಪೋಲಾವರಂ ಪ್ರಾಜೆಕ್ಟನ್ನು ಕೂಡಾ ಕಂಪನಿ ನಿರ್ವಹಿಸಿದೆ. 4.5 ಕಿಲೋಮೀಟರ್ ಉದ್ದದ ಸಿಲ್ಕ್ಯಾರಾ ಸುರಂಗವು ಕೇಂದ್ರ ಸರ್ಕಾರದ 900 ಕಿ.ಮೀ. ಉದ್ದದ ಚಾರ್ಧಾಮ ಯಾತ್ರಾ ಸರ್ವಋತು ರಸ್ತೆಯ ಭಾಗವಾಗಿದ್ದು, ನಾಲ್ಕು ಯಾತ್ರಾಸ್ಥಳಗಳ ಸಂಪರ್ಕವನ್ನು ಸುಧಾರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

Leave a Reply

Your email address will not be published. Required fields are marked *

error: Content is protected !!