ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ಚುನಾವಣೆ; ಎಬಿವಿಪಿಗೆ ತೀವ್ರ ಮುಖಭಂಗ, ಎಡರಂಗದ ಅಭ್ಯರ್ಥಿಗಳಿಗೆ ಜಯಭೇರಿ

ಹೊಸದಿಲ್ಲಿ : ಇಲ್ಲಿನ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮತ್ತೊಮ್ಮೆ ತಮ್ಮ ಪ್ರಾಬಲ್ಯವನ್ನು ಮೆರೆದಿದೆ. ವಿದ್ಯಾರ್ಥಿ ಒಕ್ಕೂಟದ ಎಲ್ಲಾ ನಾಲ್ಕು ಸ್ಥಾನಗಳನ್ನು ಸಂಯುಕ್ತ ಎಡ ಮೈತ್ರಿಕೂಟವು ಗೆದ್ದುಕೊಂಡಿದ್ದು, ಆರೆಸ್ಸೆಸ್ ಬೆಂಬಲಿತ ಸಂಘಟನೆ ಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ಗೆ ಭಾರೀ ಮುಖಭಂಗವಾಗಿದೆ.

ಇಂದು ನಡೆದ ಮತಏಣಿಕೆಯ ಆರಂಭದ ತಾಸುಗಳಲ್ಲಿ ಎಬಿವಿಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೂ, ಮತಏಣಿಕೆ ಪ್ರಗತಿ ಸಾಧಿಸುತ್ತಿದ್ದಂತೆಯೇ ಎಡಪಂಥೀಯ ಅಭ್ಯರ್ಥಿಗಳು ಭಾರೀ ಮುನ್ನಡೆ ಗಳಿಸಿ, ಜಯಭೇರಿ ಬಾರಿಸಿದರು.

ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಚುನಾವಣೆ ನಡೆದಿದ್ದವು.

ಕೋವಿಡ್ ಸಾಂಕ್ರಾಮಿಕ ಹಾವಳಿಯ 4 ವರ್ಷಗಳ ಬಳಿಕ ಜೆಎನ್‌ಯುಗೆ ಮೊದಲ ಬಾರಿ ಚುನಾವಣೆ ನಡೆದಿದೆ.ಎಡಪಂಥೀಯ ವಿದ್ಯಾರ್ಥಿಸಂಘಟನೆಗಳಾದ ಅಖಿಲ ಭಾರತದ ವಿದ್ಯಾರ್ಥಿ ಸಂಘ (ಎಐಎಸ್‌ಎ), ಪ್ರಜಾತಾಂತ್ರಿಕ ವಿದ್ಯಾರ್ಥಿಗಳ ಒಕ್ಕೂಟ(ಡಿಎಸ್‌ಎಫ್), ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾಗೂ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್‌ಎಫ್) ಗಳನ್ನು ಒಳಗೊಂಡ ಸಂಯುಕ್ತ ಎಡರಂಗ ಹಾಗೂ ಆರೆಸ್ಸೆಸ್ ಬೆಂಬಲಿತ ಎಬಿವಿಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.

ವಿಜೇತ ಎಡ ಮೈತ್ರಿಕೂಟದ ಅಭ್ಯರ್ಥಿ 3100 ಮತಗಳನ್ನು ಗಳಿಸಿದರೆ, ಎಬಿವಿಪಿಯ ಅಧ್ಯಕ್ಷೀಯ ಅಭ್ಯರ್ಥಿ ಉಮೇಶ್ ಚಂದ್ರ ಅವರಿಗೆ 2,118 ಮತಗಳನ್ನು ಪಡೆದಿದ್ದಾರೆ.

ಇತರ ಮೂರು ಸ್ಥಾನಗಳು ಕೂಡಾ ಎಡರಂಗದ ಪಾಲಾಗಿದ್ದು, ಉಪಾಧ್ಯಕ್ಷರಾಗಿ ಆವಜಿತ್ ಘೋಷ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಶಿ ಆರ್ಯ, ಜಂಟಿ ಕಾರ್ಯದರ್ಶಿಯಾಗಿ ಮುಹಮ್ಮದ್ ಸಾಜಿದ್ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!