ಬೈಂದೂರು: ಜನ ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆಯಿದೆ-ಗೀತಾ ಶಿವರಾಜ್ ಕುಮಾರ್

ಬೈಂದೂರು , ಮಾ 22: ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್. ಬಂಗಾರಪ್ಪನವರು ಜನಪರ ಕಾಳಜಿಯಿಂದ ಹೆಸರು ಪಡೆದವರು. ರಾಜಕೀಯವನ್ನು ಯಾವತ್ತೂ ಸ್ವಾರ್ಥಕ್ಕೆ ಬಳಸಿಕೊಳ್ಳದ ಬಂಗಾರಪ್ಪ ಜನಪರ ಕೊಡುಗೆಗಳನ್ನು ರಾಜ್ಯದ ಜನತೆಗೆ ನೀಡಿದವರು. ಉಚಿತ ಕೃಷಿ ಪಂಪ್ ಸೆಟ್‌ಗಳ ಮೂಲಕ ರಾಜ್ಯದ ರೈತರ ಕಣ್ಣೊರೆಸಿದವರು. ಜನಾಶೀರ್ವಾದ ನನಗೆ ದೊರಕಿದರೆ ಅಪ್ಪನ ಹಾದಿಯಲ್ಲೇ ನಡೆಯುವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.

ಅವರು ಗುರುವಾರ ನೆಂಪುವಿನಲ್ಲಿ ಮಾಜಿ ಶಾಸಕ ಬಿ. ಎಂ.ಸುಕುಮಾರ ಶೆಟ್ಟರ ನಿವಾಸದಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನನಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಹೊಸತಲ್ಲ. ಈ ಹಿಂದೆಯೂ ನಾನು ಲೋಕಸಭೆಗೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ನಾನು ಅಧಿಕಾರ ಇಲ್ಲದೇ ಇದ್ದರೂ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಬಾರಿ ಜನ ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆಯಿದೆ. ಜನರ ನಂಬಿಕೆಯನ್ನು ನಾನು ಉಳಿಸಿಕೊಳ್ಳುವೆ ಎಂದರು. ಹ್ಯಾಟ್ರಿಕ್ ಹೀರೋ, ನಟ ಶಿವರಾಜ್ ಕುಮಾರ್ ಮಾತನಾಡಿ, ಈ ಬಾರಿಯ ಚುನಾವಣೆ ಯಲ್ಲಿ ಶೇ 80ರಷ್ಟು ತೊಡಗಿಸಿಕೊಳ್ಳುತ್ತೇನೆ. ಮತದಾರರು ಗೀತಾ ಕೈ ಹಿಡಿದರೆ ಬಂಗಾರಪ್ಪನವರ ರಾಜಕೀಯ ಪಾರದರ್ಶಕತೆ ಮತ್ತೆ ವಿಜೃಂಭಿಸಲಿದೆ ಎಂದರು. ಸಚಿವ ಮಧು ಬಂಗಾರಪ್ಪ ಕೂಡಾ ಉತ್ತಮ ರಾಜಕಾರಣಿಯಾಗಿದ್ದು ಜನಸ್ನೇಹಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಉತ್ತಮ ನಾಯಕರನ್ನು ಹೊಂದಲು ಈ ಚುನಾವಣೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ಭಾವಿಸುತ್ತೇನೆ ಎಂದರು.ಸಚಿವ ಮಧು ಬಂಗಾರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾವತ್ತೂ ಜಾತಿ ಧರ್ಮಗಳ ರಾಜಕಾರಣ ಮಾಡಿಲ್ಲ. ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ ಗ್ಯಾರೆಂಟಿಗಳನ್ನು ರಾಜ್ಯ ಎಲ್ಲಾ ಅರ್ಹ ಜನತೆಗೆ ತಲುಪಿಸುವ ಕೆಲಸಗಳಾಗಿವೆ. ಅತ್ಯಂತ ಕಷ್ಟದಲ್ಲಿದ್ದ ದೇವಸ್ಥಾನಗಳಿಗೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಆರಾಧನಾ ಯೋಜನೆಯ ಮೂಲಕ ಪುನರುಜ್ಜೀವನಗೊಳಿಸ ಲಾಗಿದೆ ಎಂಬುದನ್ನು ಜನ ಮರೆತಿಲ್ಲ ಎಂದರು.

ಬಿಜೆಪಿಯವರು ರಾಮನ ಹೆಸರನ್ನು ಬೀದಿಗೆ ತಂದಿದ್ದಾರೆ. ಆ ಮೂಲಕ ರಸ್ತೆ ಬದಿಗಳಲ್ಲಿ ರಾಮನ ಚಿತ್ರಗಳನ್ನು ಹಾಕಿದ್ದು. ಅದೀಗ ಬಿಸಿಲು ಗಾಳಿಗೆ ಹರಿದು ಕಸದಬುಟ್ಟಿ ಸೇರುವಂತಾಗಿದೆ. ಕಾಂಗ್ರೆಸ್ ಅಂತ ಕೆಲಸವನ್ನು ಯಾವತ್ತೂ ಮಾಡಿಲ್ಲ ಮಾಡುವುದೂ ಇಲ್ಲ ಎಂದರು. ಬೈಂದೂರು ಮಾಜೀ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೇಳೂರು ಶಾಸಕ ಗೋಪಾಲಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಕೆಪಿಸಿಸಿ ಸದಸ್ಯ ಪ್ರಕಾಶ್ ಶೆಟ್ಟಿ, ಕೆಪಿಸಿಸಿ ವಕ್ತಾರ ಅನಿಲ್, ಸಂಜೀವ ಶೆಟ್ಟಿ ಸಂಪಿಗೇಡಿ,ಡಿಆರ್ ರಾಜು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!