‘ಕೈ’ ತಪ್ಪಿದ ಟಿಕೆಟ್- ತವರೂರಿನಲ್ಲಿ ಪ್ರತ್ಯಕ್ಷವಾದ ಸದಾನಂದ ಗೌಡ: ದೈವದ ನುಡಿಯಂತೆ ಮುಂದಿನ ಹೆಜ್ಜೆ…?

ಸುಳ್ಯ: ಬೆಂಗಳೂರು ಉತ್ತರ ಟಿಕೆಟ್ ಕೈತಪ್ಪಿದ ಬಳಿಕ ಸ್ವಪಕ್ಷದ ವಿರುದ್ಧ ಬಂಡೆದಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಣ್ಣಗಾಗಿದ್ದು, ತಮ್ಮ ಮುಂದಿನ ನಡೆಗಾಗಿ ತವರು ನೆಲದಲ್ಲಿ ದೈವದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಸುಳ್ಯದ ಮೂಲಮನೆಯಾದ ದೇವರಗುಂಡದಲ್ಲಿ ದೈವ ಕೋಲ ಇರುವ ಹಿನ್ನೆಲೆಯಲ್ಲಿ ತೆರಳಿದ್ದು, ತಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬಯಸಿ ದೈವಕ್ಕೆ ಮೊರೆ ಇಟ್ಟಿದ್ದಾರೆ. ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ್ದ ಅವರು, ಬಿಜೆಪಿ ನಾಯಕರ ಒತ್ತಾಸೆಯಿಂದ ಮರುಸ್ಪರ್ಧೆ ಘೋಷಿಸಿದ್ದರು. ಆದರೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಹೆಸರು ಘೋಷಣೆಯಾಗಿದ್ದು, ಇದರಿಂದ ಡಿವಿಎಸ್‌ ತೀವ್ರ ಅಸಮಾಧಾನಗೊಂಡಿದ್ದರು.‌

ಅಷ್ಟೇ ಅಲ್ಲದೆ ಹುಟ್ಟು ಹಬ್ಬದಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಕಾಂಗ್ರೆಸ್‌ನವರು ತಮ್ಮನ್ನು ಸಂಪರ್ಕಿಸಿದ್ದಾರೆ, ಬಿಜೆಪಿಯವರೂ ಮನವೊಲಿಸುತ್ತಿದ್ದಾರೆ. ನನ್ನ ಮುಂದಿನ ನಿರ್ಧಾರಗಳನ್ನು ಆತ್ಮಸಾಕ್ಷಿ ಹಾಗೂ ಕುಟುಂಬದವರನ್ನು ಕೇಳಿ ಮಾಡುತ್ತೇನೆ ಎಂದಿದ್ದರಲ್ಲದೆ ಮಂಗಳವಾರವೇ ಸುದ್ದಿಗೋಪ್ಠಿ ಕರೆಯುವುದು ಮಾಹಿತಿ ನೀಡುವುದಾಗಿ ಹೇಳಿದ್ದರು.

ಮಂಗಳವಾರ ಒಕ್ಕಲಿಗರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬುಧವಾರ ಪತ್ರಿಕಾಗೋಷ್ಠಿ ಕರೆಯುವುದಾಗಿ ಹೇಳಿದ್ದರು.

ಆದರೆ ಇದರ ನಡುವೆ ಬುಧವಾರ ಬೆಳಗ್ಗೆಯೇ ಬೆಂಗಳೂರಿನಿಂದ ತೆರಳಿದ್ದು, ದೈವ ಕೋಲ ಮುಗಿಸಿ ಶುಕ್ರವಾರದ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸದಾನಂದಗೌಡರನ್ನು ಸಂಘ-ಪರಿವಾರದ ಮುಖಂಡರೂ ಕರೆಯಿಸಿಕೊಂಡು ಸಮಾಧಾನ ಹೇಳಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಡರಾತ್ರಿ ಸುಳ್ಯಕ್ಕೆ ಆಗಮನ: ಸದಾನಂದ ಗೌಡ ಅವರು ಬುಧವಾರ ತಡರಾತ್ರಿ ಸುಳ್ಯದ ಮಂಡೆಕೋಲಿನ ತಮ್ಮ ದೇವರಗುಂಡದ ಮನೆಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ದೇವರಗುಂಡದಲ್ಲಿರುವ ತಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿ ರಾಜಕೀಯ ನಿರ್ಧಾರ ಕೈಗೊಳ್ಳಲು ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ. ಗುರುವಾರ ಬೆಳಗ್ಗೆ ಅವರ ರಾಜಕೀಯದ ಮುಂದಿನ ನಡೆದ ಬಗ್ಗೆ ನಿರ್ಧಾರದ ಸ್ಪಷ್ಟ ಮಾಹಿತಿ ಸಿಗುವ ನಿರೀಕ್ಷೆಯಿದೆ.

ಬಿಜೆಪಿಯಿ ಬೆದರಿಕೆ ತಂತ್ರ ಉಪಯೋಗಿಸಿತ್ತಾ…? ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ, ಹಲವಾರು ವರ್ಷ ಆರ್ ಎಸ್ ಎಸ್ ಸಂಘಟನೆಯಲ್ಲಿದ್ದು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದ ಗೌಡರು ಶಾಸಕರಾಗಿ, ಸಂಸದರಾಗಿ, ಬಿಎಸ್ ಯಡಿಯೂರಪ್ಪ ಪಕ್ಷದಿಂದ ಹೊರನಡೆದಾಗ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ರಾಜ್ಯವನ್ನು ಮುನ್ನಡೆಸಿದ್ದರು. ಕಳೆದ ಹತ್ತು ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ, ಗೊಬ್ಬರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇಷ್ಟೇಲ್ಲ ಪಕ್ಷದಿಂದ ಅನುಭವಿಸಿದ ಸದಾನಂದ ಗೌಡರು ಈ ಬಾರಿಯ ಲೋಕಸಭಾ ಟಿಕೆಟ್ ತಪ್ಪಿದಕ್ಕೆ ಪಕ್ಷ ತ್ಯಜಿಸುವ ನಿರ್ಧಾರಕ್ಕೆ ತಡೆವೊಡ್ಡಲು ಬಿಜೆಪಿ ಬೆದರಿಕೆ ತಂತ್ರ ಉಪಯೋಗಿಸಿದೆ ಎನ್ನುವುದು ಅವರ ನಿಕಟ ವರ್ತಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!