ಶೋಭಾ ಕರಂದ್ಲಾಜೆ ವಿರುದ್ಧ ಡಿಎಂಕೆ ದೂರು: ಸೂಕ್ತ ಕ್ರಮಕ್ಕೆ ಚುನಾವಣಾ ಆಯೋಗ ಸೂಚನೆ

ನವದೆಹಲಿ: ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ತಮಿಳುನಾಡು ನಂಟು ಇದೆ ಎಂದು ಹೇಳುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಡಿಎಂಕೆ ನೀಡಿದ ದೂರಿನ ಕುರಿತು ತಕ್ಷಣವೇ ಸೂಕ್ತ ಕ್ರಮಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಬುಧವಾರ ನಿರ್ದೇಶನ ನೀಡಿದೆ.

ಈ ವಿಷಯದ ಬಗ್ಗೆ 48 ಗಂಟೆಗಳ ಒಳಗೆ ವರದಿ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಐಇಡಿ ಸ್ಫೋಟಕ್ಕೆ ತಮಿಳುನಾಡಿನ ವ್ಯಕ್ತಿಯೊಬ್ಬರು ಕಾರಣ. ಬಾಂಬರ್ ಕೃಷ್ಣಗಿರಿಯ ಅರಣ್ಯದಲ್ಲಿ ತರಬೇತಿ ಪಡೆದಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಅವರ ಹೇಳಿಕೆಯನ್ನು ಖಂಡಿಸಿದ್ದ ಡಿಎಂಕೆ, ಕೇಂದ್ರ ಸಚಿವೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.

ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ, ಕೇಂದ್ರ ಸಚಿವರ ಹೇಳಿಕೆಯು ತಮಿಳುನಾಡಿನ ಜನರನ್ನು “ಭಯೋತ್ಪಾದಕರು” ಎಂದು ಬಿಂಬಿಸಲಾಗಿದೆ ಎಂದು ಡಿಎಂಕೆ ಹೇಳಿದೆ.

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಯಲ್ಲಿ ಮಾತನಾಡಿದ್ದ ಶೋಭಾ ಕರಂದ್ಲಾಜೆ, ”ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಮಿಳುನಾಡಿನಿಂದ ಬಂದವರು ಇಲ್ಲಿ ಬಾಂಬ್ ಇಡುತ್ತಾರೆ. ದೆಹಲಿಯಿಂದ ಬಂದವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ ಮತ್ತು ಕೇರಳದಿಂದ ಬಂದವರು ಆಸಿಡ್ ದಾಳಿ ನಡೆಸುತ್ತಾರೆ” ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!