ಕೇಂದ್ರದಿಂದ ಅನ್ಯಾಯವಾದಾಗ, ಜನ ಬರದಿಂದ ತತ್ತರಿಸಿದಾಗ ನೆರವಿಗೆ ಮೊರೆ ಇಟ್ಟಾಗ ಇವರಿಗೆ ಯಾಕೆ ಈ ಆಕ್ರೋಶ ಬರಲಿಲ್ಲ?: ದಿನೇಶ್ ಗುಂಡೂರಾವ್
ಬೆಂಗಳೂರು: ‘ಕೊನೆಗೂ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ ಸೂರ್ಯ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಸಂತೋಷದ ವಿಷಯ. ಆದರೆ, ಈ ಪ್ರತಿಭಟನೆ ಯಾವ ಪುರುರ್ಥಕ್ಕಾಗಿ?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಮಾಜದ ಶಾಂತಿ ಭಂಗ ಉಂಟುಮಾಡುವವರ ವಿರುದ್ಧ ನಮ್ಮ ಸರಕಾರ ತೀಕ್ಷ್ಣ ಕ್ರಮ ಕೈಗೊಳ್ಳಲಿದೆ. ಆದರೆ, ಇಂತಹ ಘಟನೆಗಳು ನಡೆದಾಗ ಇವರಲ್ಲಿ ಹುಟ್ಟುವ ಈ ಆಕ್ರೋಶ, ಪ್ರತಿಭಟನೆ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾದಾಗ ಎಲ್ಲಿಹೋಗಿತ್ತು? ನಮ್ಮ ಜನರು ಬರದಿಂದ ತತ್ತರಿಸಿ ಕೇಂದ್ರದ ನೆರವಿಗೆ ಮೊರೆ ಇಟ್ಟಾಗ ಇವರಿಗೆ ಯಾಕೆ ಈ ಆಕ್ರೋಶ ಬರಲಿಲ್ಲ?’ ಎಂದು ಕೇಳಿದ್ದಾರೆ.
‘ನಮ್ಮ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾದಾಗ ಈ ಸಂಸದರಿಗೆ ಯಾಕೆ ಆಕ್ರೋಶ ಹುಟ್ಟಲಿಲ್ಲ? ನದಿ ನೀರಿನ ವಿಷಯದಲ್ಲಿ ಅನ್ಯಾಯವಾದಾಗ ಏಕೆ ಇವರ ರಕ್ತ ಕುದಿಯಲಿಲ್ಲ?. ಬಿಜೆಪಿ ಸಂಸದರುಗಳಿಗೆ ಆಕ್ರೋಶ ಬಂದು ಬೀದಿಗಿಳಿಯಬೇಕಾದರೆ ಒಂದೋ ಚುನಾವಣೆ ಬರಬೇಕು, ಇಲ್ಲವಾದಲ್ಲಿ ಯಾವುದಾದರೂ ಕೋಮು ಪ್ರಚೋಧನೆ ನೀಡುವ ಘಟನೆ ನಡೆಯಬೇಕು. ಆಗ ಸಮಾಜದ ನೆಮ್ಮದಿಗೆ ಬೆಂಕಿ ಹಚ್ಚಿ ತಮ್ಮ ಮತವನ್ನು ಸುಭದ್ರಗಳಿಸಿಕೊಳ್ಳಲು ಇವರು ಬೀದಿಗಿಳಿಯುತ್ತಾರೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ನಾಚಿಕೆಯಾಗಬೇಕು ನಿಮಗೆ. ಅಧಿಕಾರದಲ್ಲಿದ್ದಾಗ ಕನ್ನಡಿಗರಿಗೆ ಅನ್ಯಾಯ ಎಸಗಿ ಈಗ ಚುನಾವಣೆಗಳಿರು ವಾಗ ಬೀದಿಯಲ್ಲಿ ಕುಳಿತು ಪ್ರತಿಭಟಿಸುವ ನಿಮ್ಮ ನಾಟಕ ಪ್ರಜ್ಞಾವಂತ ಕನ್ನಡಿಗರಿಗೆ ಅರ್ಥವಾಗಿದೆ. ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತದೆ, ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವ ನೀವು ನಾಡಿಗೂ, ಸಮಾಜಕ್ಕೂ ಕಂಟಕ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.