ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ತಮಿಳಿಗರ ಕೈವಾಡ: ಹೇಳಿಕೆ ಹಿಂಪಡೆದ ಶೋಭಾ ಕರಂದ್ಲಾಜೆ

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ತಮಿಳುನಾಡಿನ ವ್ಯಕ್ತಿಗಳಿಗೂ ಸಂಬಂಧವಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದೀಗ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಆಜಾನ್’ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದೀಯ ಎಂದು ಅಂಗಡಿಯವನೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸಂಸದರು ನಡೆಸಿದ ಪ್ರತಿಭಟನೆ ವೇಳೆ ಶೋಭಾ ಕರಂದ್ಲಾಜೆ ಅವರು ನೀಡಿದ್ದ ಈ ಹೇಳಿಕೆ ಇದೀಗ ತೀವ್ರ ಸ್ವರೂಪ ಪಡೆಯುತ್ತಿದೆ.

ಶೋಭಾ ಕರಂದ್ಲಾಜೆ ಅವರ ಬೆಂಗಳೂರು ಸ್ಫೋಟದಲ್ಲಿ ತಮಿಳುನಾಡಿನ ವ್ಯಕ್ತಿಗಳ ಕೈವಾಡವಿದೆ ಎಂಬ ಹೇಳಿಕೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಕಾರಣವಾಯಿತು. ಈ ಹೇಳಿಕೆಯನ್ನು ತೀವ್ರ ಖಂಡಿಸಿರುವ ಸ್ಟಾಲಿನ್, ದ್ವೇಷಪೂರಿತ ಭಾಷಣಕ್ಕಾಗಿ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ತಮ್ಮ ಹೇಳಿಕೆ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳು ತ್ತಿರುವುದನ್ನು ಅರಿತ ಶೋಭಾ ಕರಂದ್ಲಾಜೆ ಅವರು, ಎಕ್ಸ್ ನಲ್ಲಿ ಕ್ಷಮೆಯಾಚಿಸಿದ್ದು ತಮ್ಮ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿದ್ದಾರೆ. ನಾನು ತಮಿಳಿಗರನ್ನು ಟೀಕಿಸುವ ಉದ್ದೇಶವಿರಲಿಲ್ಲ. ಆದರೆ ನನ್ನು ಕಳವಳವನ್ನು ಎತ್ತಿ ತೋರಿಸಿದೆ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ತನ್ನ ಹೇಳಿಕೆ ನಿರ್ದಿಷ್ಟವಾಗಿ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದ ವ್ಯಕ್ತಿಗಳನ್ನು ಕೇಂದ್ರಿಕರಿಸಿದೆ ಎಂದು ಅವರು ಒತ್ತಿ ಹೇಳಿದರು.

ಒಬ್ಬ ವ್ಯಕ್ತಿ ತಮಿಳುನಾಡಿನಿಂದ ಬಂದು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾನೆ. ಮತ್ತೊಬ್ಬ ವ್ಯಕ್ತಿ ದೆಹಲಿಯಿಂದ ಬಂದು ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗುತ್ತಾನೆ. ಇನ್ನೊಬ್ಬ ವ್ಯಕ್ತಿ ಕೇರಳದಿಂದ ಬಂದು ಕಾಲೇಜು ವಿದ್ಯಾರ್ಥಿಗಳ ಮೇಲೆ ಆಸಿಡ್ ಎರಚಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!