ಚುನಾವಣಾ ಬಾಂಡ್ ಯೋಜನೆ ಜಗತ್ತಿನ ಅತಿ ದೊಡ್ಡ ಹಗರಣ: ನಟ ಪ್ರಕಾಶ್ ರಾಜ್

ಮಂಗಳೂರು:ಇಡಿ ಮತ್ತು ಐಟಿ ಬಳಸಿ ಕಾರ್ಪೊರೇಟ್ ಕಂಪನಿಗಳು ಮತ್ತು ಉದ್ಯಮಿಗಳಿಂದ ಬಿಜೆಪಿ ಭಾರಿ ದೇಣಿಗೆ ಪಡೆಯುತ್ತಿದೆ. ಪಕ್ಷಕ್ಕೆ ದೇಣಿಗೆ ನೀಡಿದ ಕಂಪನಿಗಳಿಗೆ ಗುತ್ತಿಗೆ ನೀಡುವುದು ವಿಶ್ವದ ಅತಿದೊಡ್ಡ ಹಗರಣ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದ ಜನತೆಗೆ ವಿವರಣೆ ನೀಡಬೇಕಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಕೇಂದ್ರ ಏಕೆ ರಹಸ್ಯವಾಗಿಟ್ಟಿತ್ತು ಎಂದು ಪ್ರಶ್ನಿಸಿದರು. ಇದು ಲೂಟಿ ಅಲ್ಲವೇ? ಪ್ರಧಾನಿ ಈ ಬಗ್ಗೆ ಮನ್ ಕಿ ಬಾತ್‌ನಲ್ಲಿ ಹೇಳಬೇಕಿದೆ ಎಂದು ಒತ್ತಾಯಿಸಿದರು.

ಬಿಜೆಪಿಗೆ ಬಂದಿರುವ 6,000 ಕೋಟಿ ರೂಪಾಯಿಗೆ ಹೋಲಿಸಿದರೆ ವಿರೋಧ ಪಕ್ಷಗಳು ಪಡೆದಿರುವ ಮೊತ್ತವು ಅವರ ಲೋಕಸಭಾ ಸ್ಥಾನಗಳಿಗೆ ಅಸಮಾನವಾಗಿದೆ ಎಂಬ ಅಮಿತ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾಜ್, ಕಡಿಮೆ ಸಂಸದರು ಇರುವ ಪಕ್ಷಗಳು ಜಾಸ್ತಿ ತೆಗೆದು ಕೊಂಡಿದ್ದಾರೆ ಎನ್ನುತ್ತಾರೆ.‌ ಇದರರ್ಥ ಏನು? ಹೆಚ್ಚು ತೆಗೆದುಕೊಂಡು ಹಂಚಿಕೊಂಡರೆ ಶಿಕ್ಷೆ ಕಡಿಮೆ ಆಗಬೇಕೆಂದೇ ಎಂದು ಅವರು ಪ್ರಶ್ನಿಸಿದರು.

ಲಾಟರಿ ಏಜೆಂಟ್ ಮಾರ್ಟಿನ್ ರಿಂದ ಚುನಾವಣಾ ಬಾಂಡ್ ತೆಗೆದುಕೊಂಡಿರುವುದಾಗಿ ಡಿಎಂಕೆ ಒಪ್ಪಿಕೊಂಡಿದೆ. ಬಿಜೆಪಿ ಪಡೆದ ದೇಣಿಗೆಯ ಬಗ್ಗೆ ಏಕೆ ಸಾರ್ವಜನಿಕವಾಗಿ ಹೇಳುತ್ತಿಲ್ಲ? ಈಗ ಅದು ಹೊರಬರುತ್ತಿದೆ… ನೀವು ದಾಳಿಗಳನ್ನು ಮಾಡಿಸಿ ಸಂಗ್ರಹಿಸಿದ ಹಣವೇ?. ಚುನಾವಣೆಗೆ ಬಿಜೆಪಿಗೆ ಹಣ ಏಕೆ ಬೇಕು. ಈ ಹಣದಲ್ಲಿ ಶಾಸಕ, ಸಂಸದರನ್ನು ಖರೀದಿಸಿ ಮತದಾರರಿಗೆ ಲಂಚ ಕೊಡುತ್ತಿದ್ದೀರಾ ಅದನ್ನು ನಾವು ಪ್ರಶ್ನಿಸಬೇಕಲ್ಲವೇ ಎಂದು ಹೇಳಿದ್ದಾರೆ.

‘ಮೋದಿ ಪರಿವಾರ’ ಯಾರೆಂದು ಈಗ ಸ್ಪಷ್ಟವಾಗಿದೆ ಎಂದು ರಾಜ್ ಹೇಳಿದರು. ಲಾಟರಿ ನಡೆಸುತ್ತಿರುವವರು, ಫಾರ್ಮಾ ಕಂಪನಿಗಳು, ಅಂಬಾನಿಗಳು ಮತ್ತು ಅದಾನಿಗಳು ನಿಮ್ಮ ಪರಿವಾರ ಎಂದು ಅವರು ಆರೋಪಿಸಿದರು. ಪಿಎಂ ಕೇರ್ ಅಡಿಯಲ್ಲಿ ಪಡೆದ ಹಣವನ್ನು ಸಾರ್ವಜನಿಕಗೊಳಿಸಿ ದರೆ ಬಿಜೆಪಿ ಮುಖ ಮತ್ತಷ್ಟು ಕಳಚಿಕೊಳ್ಳುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ ತಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಆದರೆ ದೇಶದ ಪ್ರಜೆಯಾಗಿ ಆಡಳಿತ ಪಕ್ಷವನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು. ಪಕ್ಷಕ್ಕಲ್ಲ ಅಭ್ಯರ್ಥಿಗೆ ಮತ ನೀಡಿ ಎಂದು ಸಲಹೆ ನೀಡಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡುವ ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!