ಡಿ.ವಿ.ಸದಾನಂದ ಗೌಡ ಬಿಜೆಪಿಗೆ ಗುಡ್ಬೈ? ಕಾಂಗ್ರೆಸ್ನಿಂದ ಸ್ಪರ್ಧೆ ಬಗ್ಗೆ ಶೀಘ್ರ ನಿರ್ಧಾರ..?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿ ಬಂದಿದೆ.
ನನ್ನ ಅಭಿಮಾನಿ ಬಳಗ ಶುಭಾಶಯ ಹೇಳಲು ಒಂದು ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮ ಮುಗಿದ ಮೇಲೆ ನಾನು ಆಲೋಚನೆ ಮಾಡ್ತೇನೆ. ನಾಳೆ (ಮಾರ್ಚ್ 19) ಬೆಳಗ್ಗೆ 10:30 ಮಾದ್ಯಮದ ಮುಂದೆ ಬರುತ್ತೇನೆ. ಆಗ ಎಲ್ಲವೂ ಗೊತ್ತಾಗಲಿದೆ” ಎಂದು ಸದಾನಂದ ಗೌಡರು ಹೇಳಿದರು.
ಕಾಂಗ್ರೆಸ್ ನಾಯಕರು ಅದರಲ್ಲೂ ಮುಖ್ಯವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸದಾನಂದ ಗೌಡರಿಗೆ ಗಾಳ ಹಾಕಿದ್ದಾರೆ ಎಂಬ ಮಾತು ನಿಜ ಎನ್ನುತ್ತವೆ ಮೂಲಗಳು. ಗಾಳ ಮಾತ್ರವಲ್ಲ, ಡಿವಿಎಸ್ ಕಾಂಗ್ರೆಸ್ ಸೇರುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ಡಿ.ವಿ.ಸದಾನಂದ ಗೌಡ ಅವರಿಗೆ ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಮೈಸೂರು-ಕೊಡಗು ಕ್ಷೇತ್ರಗಳ ಆಫರ್ ನೀಡಲಾಗಿದೆ ಎನ್ನಲಾಗಿದೆ. ಇದರಲ್ಲಿ ಬೆಂಗಳೂರು ಉತ್ತರ ಅಥವಾ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಬಹುದು ಎನ್ನಲಾಗಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಮೈಸೂರು–ಕೊಡಗು ಕ್ಷೇತ್ರದಿಂದ ಸದಾನಂದಗೌಡರು ಕಣಕ್ಕೆ ಇಳಿಯ ಬಹುದು. ಮಂಗಳವಾರ ನಡೆಸಲಿರುವ ಪತ್ರಿಕಾಗೋಷ್ಠಿಯಲ್ಲಿ ಡಿ.ವಿ.ಸದಾನಂದ ಗೌಡ ಅವರು ವಿಚಾರವನ್ನೇ ಪ್ರಕಟಿಸುವ ಸಾಧ್ಯತೆಗಳಿವೆ.
ಮೂಲಗಳ ಪ್ರಕಾರ ಬೆಂಗಳೂರು ಉತ್ತರಕ್ಕೆ ಎಸ್. ಟಿ ಸೋಮಶೇಖರ್ ಅಭ್ಯರ್ಥಿ ಆಗುವ ಸಾಧ್ಯತೆ ಇದ್ದರೆ, ಮೈಸೂರು ಕೊಡಗು ಕ್ಷೇತ್ರಕ್ಕೆ ಸದಾನಂದಗೌಡರು ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಎಸ್. ಸೋಮಶೇಖರ್ ಅವರ ಜತೆಗೆ ಈಗಾಗಲೇ ಮಾತುಕತೆಗಳು ಮುಗಿದಿವೆ ಎನ್ನಲಾಗಿದೆ.
ಡಿವಿ ಸದಾನಂದಗೌಡರ ಪತ್ನಿ ಕೊಡಗಿನವರಾಗಿರುವ ಕಾರಣ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಸದಾನಂದಗೌಡರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.