ಚುನಾವಣಾ ಬಾಂಡ್: ಇದಿಷ್ಟೇ ಸಾಲದು, ಎಲ್ಲ ಮಾಹಿತಿ ಬೇಕು- ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಮತ್ತೆ ಚಾಟಿ!
ನವದೆಹಲಿ: ಚುನಾವಣಾ ಬಾಂಡ್ ಮಾಹಿತಿ ಬಹಿರಂಗ ವಿಚಾರವಾಗಿ ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಭಾರಿ ಹಿನ್ನಡೆಯಾಗಿದ್ದು, ವಿವರ ಕೇಳಿದ್ದ ಸರ್ವೋಚ್ಛ ನ್ಯಾಯಾಲಯ ವಿವರ ಬಹಿರಂಗದಲ್ಲೂ ಸೆಲೆಕ್ಟಿವ್ ಆಗದಿರಿ. ಎಲ್ಲ ಮಾಹಿತಿ ಬೇಕು ಎಂದು ಚಾಟಿ ಬೀಸಿದೆ.
ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಚುನಾವಣಾ ಬಾಂಡ್‌ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಮತ್ತೆ ಹಿನ್ನಡೆಯಾಗಿದ್ದು, ಚುನಾವಣಾ ಬಾಂಡ್‌ಗಳ ಯುನಿಕ್ ನಂಬರ್ ಸೇರಿ ಎಲ್ಲ ಮಾಹಿತಿಯನ್ನೂ ಎಸ್‌ಬಿಐ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಚುನಾವಣಾ ಬಾಂಡ್ ಗಳ ಕುರಿತು ಎಲ್ಲ ಮಾಹಿತಿಯನ್ನು ಎಸ್‌ಬಿಐ ಒದಗಿಸಬೇಕು. ಆದರೆ ಎಸ್ ಬಿಐ ಕೆಲ ನಿಯಮಿತ ಮಾಹಿತಿಗಳನ್ನಷ್ಟೇ ಒದಗಿಸಿದೆ. ಆದರೆ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಇರುವ ಅಫಿಡವಿಟ್ ಅನ್ನು ಎಸ್‌ಬಿಐ ಕೋರ್ಟ್ ಗೆ ನೀಡಬೇಕು. ಆಯ್ಕೆ ಮಾಡಲಾದ ಮಾಹಿತಿಯನ್ನಷ್ಟೇ ನೀಡಿದರೆ ಆಗುವುದಿಲ್ಲ. ಯುನಿಕ್ ನಂಬರ್ ಸೇರಿ ಸಮಗ್ರ ಮಾಹಿತಿಯನ್ನು ಒದಗಿಸಬೇಕು. ಇದುವರೆಗೆ ಚುನಾವಣೆ ಆಯೋಗಕ್ಕೆ ಎಸ್‌ಬಿಐ ಎರಡು ಪಟ್ಟಿ ನೀಡಿದೆ. ಈಗ ಎಲ್ಲ ಮಾಹಿತಿ ಒದಗಿಸಬೇಕು ಎಂದು ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಏನಿದು ಯುನಿಕ್ ನಂಬರ್?
ಚುನಾವಣಾ ಬಾಂಡ್‌ಗಳಿಗೆ ವಿಶೇಷ ಗುರುತಿನ ಸಂಖ್ಯೆ ಇರುತ್ತದೆ. ಇದನ್ನೇ ಯುನಿಕ್ ನಂಬರ್ ಎನ್ನಲಾಗುತ್ತದೆ. ಈ ಯುನಿಕ್ ನಂಬರ್‌ನಿಂದ ಬಾಂಡ್ ಖರೀದಿಸಿದ ದೇಣಿಗೆದಾರರು, ಅವರು ನೀಡಿದ ಮೊತ್ತ ಹಾಗೂ ರಾಜಕೀಯ ಪಕ್ಷಗಳು ಸ್ವೀಕರಿಸಿದ ಹಣದ ಬಗ್ಗೆ ನಿಖರ ಮಾಹಿತಿ ದೊರೆಯುತ್ತದೆ. ಇದೇ ಕಾರಣಕ್ಕಾಗಿಯೇ ಎಸ್‌ಬಿಐಗೆ ಯುನಿಕ್ ನಂಬರ್ ಸೇರಿ ಎಲ್ಲ ಮಾಹಿತಿ ಒದಗಿಸಬೇಕು ಸುಪ್ರೀಂ ಕೋರ್ಟ್ ಅದೇಶಿಸಿದೆ ಎಂದು ತಜ್ಞರು ಹೇಳಿದ್ದಾರೆ.