ನಮಾಜ್‌ ವೇಳೆ ಹನುಮಾನ್‌ ಚಾಲೀಸ ಹಾಕಿದ್ದಕ್ಕೆ ಹಲ್ಲೆ: ಗಾಯಾಳು ಅಂಗಡಿ ಮಾಲೀಕ ಮುಖೇಶ್ ಮಾಹಿತಿ

ಬೆಂಗಳೂರು: ಆಜಾನ್ ವೇಳೆ ಹನುಮಾನ್‌ ಚಾಲೀಸ ಹಾಕಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ಅಂಗಡಿ ಮಾಲೀಕ ಹೇಳಿಕೆ ನೀಡಿದ್ದು, ಅವರು ನನ್ನನ್ನು ಇರಿದು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯಲ್ಲಿರುವ ನಗರತ್‌ ಪೇಟೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅಂಗಡಿ ಮಾಲೀಕ ಮುಖೇಶ್, ‘ಅಂಗಡಿಯಲ್ಲಿ ಎಂದಿನಂತೆ ಸಂಜೆ ವೇಳೆ ಪೂಜೆ ಮಾಡುವ ಸಮಯದಲ್ಲಿ ಭಜನೆ ಹಾಡು ಹಾಕ್ತಾ ಇದ್ದೆ. ಈ ವೇಳೆ ಅಂಗಡಿಗೆ ಬಂದು, ‘ನಮ್ಮ ಆಜಾನ್ ಟೈಂನಲ್ಲಿ ಯಾಕೆ ಹಾಡು ಹಾಕ್ತಾ ಇದ್ದೀಯಾ’ ಎಂದು ಪ್ರಶ್ನೆ ಮಾಡಿದ್ರು. ನಂತರ ಹಲ್ಲೆಗೆ ಮುಂದಾದ್ರು, ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಮೊದಲು ಸ್ಪೀಕರ್ ತೆಗೆದುಕೊಂಡು ನನ್ನ ತಲೆಗೆ ಹೊಡೆದ್ರು. ಕೈಯಲ್ಲಿ ವೆಪನ್ ಕೂಡ ಇದ್ದ ಹಾಗೆ ಇತ್ತು. ಹಾಗಾಗಿ ಇಷ್ಟು ಗಾಯ ಆಗಿದೆ ಎಂದಿದ್ದಾರೆ.

ಅಲ್ಲದೆ ಅವರು ಚಾಕುವಿನಿಂದ ಇರಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಎರಡು ತಿಂಗಳ ಹಿಂದೆ ಅಂಗಡಿ ಇಟ್ಟಿದ್ದೇನೆ. ಮೊದಲಿನಿಂದಲೂ ರೋಲ್ ಕಾಲ್ ಮಾಡೋದು ಹಣ ಕೀಳಲು ಗದರಿಸುವ ಪ್ರಯತ್ನ ಮಾಡ್ತಿದ್ರು. ಒಟ್ಟು ಆರು ಜನ‌ ಬಂದಿದ್ರು ಸದ್ಯ ಕಂಪ್ಲೆಂಟ್ ಕೊಟ್ಟಿದ್ದೀನಿ ಎಂದು ಹೇಳಿದ್ದಾರೆ.

ಸುಲೇಮಾನ್ ವಿರುದ್ಧ ಮೊದಲೇ 2 ಪ್ರಕರಣ ದಾಖಲು

ಇನ್ನು ಪ್ರಮುಖ ಆರೋಪಿ ಸುಲೇಮಾನ್ ವಿರುದ್ಧ ಈ ಹಿಂದೆ 2 ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. ಈ ಎರಡೂ ಪ್ರಕರಣದಲ್ಲಿ ಸುಲೇಮಾನ್ ಪೊಲೀಸರಿಗೆ ಬೇಕಿದ್ದ. ಇದೀಗ ಮತ್ತೊಂದು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದುಮೂಲಗಳು ತಿಳಿಸಿವೆ.

ಮೂವರ ಬಂಧನ, ಇಬ್ಬರು ಪರಾರಿ

ಮೂಲಗಳ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಶಹನವಾಜ್, ಸುಲೇಮಾನ್ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ. ಬಾಕಿ ಆರೋಪಿಗಳಾದ ಡ್ಯಾನಿಶ್ ಮತ್ತು ತರಣ ಪರಾರಿಯಲ್ಲಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!