ಉಡುಪಿ:ತಾಯಿ ಮಕ್ಕಳ ಆಸ್ಪತ್ರೆ ಖಾಸಗೀಕರಣ ಪ್ರಯತ್ನ ಕೈಬಿಡಿ- ಡಿವೈಎಫ್ಐ ಆಗ್ರಹ 

ಉಡುಪಿ ಜಿಲ್ಲೆಯ ಜನರ ಆಶಾಕಿರಣವಾಗಿರುವ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ಬುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ರಾಜ್ಯ ಸರಕಾರ ಮತ್ತೆ ಖಾಸಗೀಕರಣ ಮಾಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು ಇಂತಹ ತೀರ್ಮಾನವನ್ನು ಯಾವುದೇ ಕಾರಣಕ್ಕೂ ಮಾಡಿಕೊಳ್ಳದೆ ಪಿಪಿಪಿ ಅಡಿ ಖಾಸಗೀಕರಣಗೊಳಿಸುವ ಪ್ರಯತ್ನದಿಂದ ಹಿಂಸರಿಬೇಕೆಂದು ಡಿವೈಎಫ್ಐ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಮತ್ತು ಹಾಜಿ ಅಬ್ದುಲ್ಲ ಚಾರಿಟೇಬಲ್ ಟ್ರಸ್ಟ್ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸುತ್ತದೆ.

ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಗಳು ಉಚಿತವಾಗಿ ಸಿಗಲಿ ಎಂಬ ಮಹತ್ವಾಕಾಂಕ್ಷೆಯಿಟ್ಟು ಹಾಜಿ‌ ಅಬ್ದುಲ್ಲರು ತಮ್ಮ ಸ್ವಂತ ಜಮೀನನ್ನು ದಾನವಿರಿಸಿ ಕಟ್ಟಿದ ಆಸ್ಪತ್ರೆಯನ್ನು ಪಿಪಿಪಿ ಯೋಜನೆಯಡಿ ಖಾಸಗೀಯವರಿಗೆ ವಹಿಸಿಕೊಡಲು ತೆರೆಮರೆಯಲ್ಲಿ ಹುನ್ನಾರ ನಡೆಸುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇದು ಹಾಜಿ ಅಬ್ದುಲ್ಲಾ ರವರ ಆಶಯದ ಮತ್ತು ಬಡಜನ ವಿರೋಧಿ ನೀತಿಯಾಗಿವೆ. ಆಳುವ ಸರಕಾರಗಳು ಖಾಸಗೀ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ಲಾಭಿಗೆ ಮಣಿದು ಈವರೆಗೆ ಸರಕಾರಿ ಆಸ್ಪತ್ರೆಗಳಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ವಂಚಿಸಿದೆ ಮತ್ತು ವೈದ್ಯಕೀಯ ನಿಯಮಗಳಂತೆ ಉಡುಪಿ ಜಿಲ್ಲೆಯಾದ್ಯಂತ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಟ ಪ್ರಾಥಮಿಕ ಆರೋಗ್ಯಕೇಂದ್ರ, ಸಮುದಾಯ ಆಸ್ಪತ್ರೆಗಳಂತವುಗಳನ್ನು ಕಟ್ಟಲು ಮುಂದಾಗಲೇ ಇಲ್ಲ. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಇರಬೇಕೆಂಬ ಕೂಗು ಇದ್ದರೂ ಅದಕ್ಕೆ ಈವರೆಗೂ ಸ್ಪಂದಿಸಲು ಸಾಧ್ಯವಾಗಲೇ ಇಲ್ಲ. ಇಂತಹ ಬಡವರ ಬದುಕಿನ ಪ್ರಶ್ನೆಯ ಬಗ್ಗೆ ಇಲ್ಲಿನ ಶಾಸಕರಾಗಲೀ, ಸಂಸದರಾಗಲೀ ಕನಿಷ್ಟ ಕಾಳಜಿಯನ್ನು ವಹಿಸದೆ ಕೇವಲ ಮತೀಯ ರಾಜಕಾರಣ ನಡೆಸುವಲ್ಲೇ ತಮ್ಮನ್ನು ತಾವು ಕಳೆದುಕೊಂಡಿರುವುದು ದುರಂತವೇ ಸರಿ. 

ಈ ಹಿನ್ನಲೆಯಲ್ಲಿ ಉಡುಪಿ ಭಾಗದ ಬಡರೋಗಿಗಳ ಬದುಕಿನ ಆಸರೆಯಾಗಿರುವ  ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರ ಯಾವುದೇ ಕಾರಣಕ್ಕೂ ಪಿಪಿಪಿ ಅಡಿಯಲ್ಲಿ ಖಾಸಗೀಯವರಿಗೆ ಒಪ್ಪಿಸಬಾರದು ಎಂದು ಡಿವೈಎಫ್ಐ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಇಲ್ಲದೇ ಹೋದಲ್ಲಿ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ನಡೆಸುವ ಹೋರಾಟವನ್ನು ಬೆಂಬಲಿಸಿ ಡಿವೈಎಫ್ಐ ಪಾಲ್ಗೊಳ್ಳಲಿದೆ ಎಂದು ಡಿವೈಎಫ್ಐ ಉಡುಪಿ ಜಿಲ್ಲಾ ಸಂಚಾಲಕರಾದ ಗಣೇಶ್ ದಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!