ಸೋಮಣ್ಣನ ಬೈಗುಳಕ್ಕೆ ಯಡಿಯೂರಪ್ಪ ಹೆದರಿಕೊಂಡು ನನ್ನ ಬಲಿ ನೀಡಿದರು- ಜೆ.ಸಿ ಮಾಧುಸ್ವಾಮಿ
ಬೆಂಗಳೂರು: ಕೆಎಸ್ ಈಶ್ವರಪ್ಪ ಬೆನ್ನಲ್ಲೇ ಇದೀಗ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ತುಮಕೂರು ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಧುಸ್ವಾಮಿ ಅವರು, ಯಡಿಯೂರಪ್ಪ ವಿರುದ್ಧ ಮಾಧುಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮನೆಯಲ್ಲಿ ಕುಳಿತಿದ್ದವರನ್ನ ಚುನಾವಣೆಗೆ ರೆಡಿ ಆಗಿ ಎಂದರು. ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ ನಮಗೆ ಬೇಸರವಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರಿಗೆ ಬೇಕಾದ ಎರಡು–ಮೂರು ಕ್ಷೇತ್ರಗಳನ್ನು ಹಠ ಮಾಡಿ ತೆಗೆದುಕೊಂಡಿದ್ದಾರೆ. ನನಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ. ಸೋಮಣ್ಣ ರಾಜ್ಯಸಭೆ ಟಿಕೆಟ್ಗಾಗಿ ನವದೆಹಲಿ ತನಕ ಹೋಗಿ ಬಂದರು. ಅಲ್ಲಿ ಟಿಕೆಟ್ ಕೈ ತಪ್ಪಿದರೆ ಇಲ್ಲಿ ಕೊಡಬಹುದಾ? ಅವರೇನು ಈ ಕ್ಷೇತ್ರದ ಸಂಬಂಧಿಕರಾ, ನೆಂಟರಾ?’ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರು ನಾನು ದೆಹಲಿಗೆ ಹೋಗುವುದನ್ನು ತಡೆದಿದ್ದರು. ನಿನಗೆ ಬಿ.ಫಾರ್ಮ್ ತಂದು ಕೊಡುವ ಜವಾಬ್ದಾರಿ ನನ್ನದು ಎಂದು ಹೇಳಿದ್ದರು. ಸೋಮಣ್ಣನ ನಾಲಿಗೆಗೆ, ಬೈಗುಳಕ್ಕೆ ಯಡಿಯೂರಪ್ಪ ಹೆದರಿಕೊಂಡು ನನ್ನ ಬಲಿ ಮಾಡಿದರು. ಆ ನೋವು ನನಗಿದೆ. ಅಪ್ಪ ಮಕ್ಕಳಿಗೆ ಸ್ವಹಿತಾಸಕ್ತಿಯೇ ಹೆಚ್ಚಾಗಿರಬಹುದು ಎಂದು ಕಿಡಿಕಾರಿದರು.
ಸೋಮಣ್ಣ ಅವರನ್ನು ಮನೆಗೆ ಬರಬೇಡಿ ಎಂದು ಹೇಳುವಷ್ಟು ಕೆಟ್ಟ ಮನುಷ್ಯ ನಾನಲ್ಲ. ನನ್ನ ಮನಸ್ಥಿತಿ ಸರಿಯಾಗಿಲ್ಲ. ಇಂತಹ ಸಮಯದಲ್ಲಿ ಬರುವುದು ಬೇಡ ಎಂದು ಹೇಳಿದೆ. ನಾನು ಯಾವುದೇ ಮಾತುಕತೆಗೆ ಸಿದ್ಧನಿಲ್ಲ. ಅವರು ಬರುತ್ತಾರೆ ಅಂತ ನಡೆಮುಡಿ ಹಾಸಿಕೊಂಡು ಕುಳಿತುಕೊಳ್ಳಲು ಆಗುತ್ತಾ?’ ಎಂದು ಪ್ರಶ್ನಿಸಿದರು.
ಸೋಮಣ್ಣ ಪರವಾಗಿ ನಾವು ಪ್ರಚಾರ ಮಾಡುವುದಿಲ್ಲ. ಹೊರಗಿನಿಂದ ಬಂದವರಿಗೆ ಬೆಂಬಲ ನೀಡುವುದಿಲ್ಲ. ಕಾರ್ಯಕರ್ತರು ತಟಸ್ಥವಾಗಿ ಇರೋಣ ಎಂದರೆ ತಟಸ್ಥವಾಗಿ ಇರುತ್ತೇನೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಕಾರ್ಯಕರ್ತರ ಸಭೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆಂದು ಹೇಳಿದರು.