ಎಸ್‌ಬಿಐ ಚುನಾವಣಾ ಬಾಂಡ್‌ಗಳ ಡೇಟಾ- ಇಸಿಐ ವೆಬ್‌ಸೈಟ್‌ನಲ್ಲಿ ಬಹಿರಂಗ

ನವದೆಹಲಿ: ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಹಿರಂಗಪಡಿಸಿದೆ. ಎಸ್ ಬಿಐ ಮಂಗಳವಾರ ಚುನಾವಣಾ ಬಾಂಡ್‌ಗಳ ಡೇಟಾವನ್ನು ಆಯೋಗಕ್ಕೆ ಹಸ್ತಾಂತರಿಸಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸಿ, ಇಸಿಐ ತನ್ನ ವೆಬ್‌ಸೈಟ್‌ನಲ್ಲಿ ಡೇಟಾವನ್ನು ಅಪ್‌ಲೋಡ್ ಮಾಡಿದೆ.

ಸುಪ್ರೀಂಕೋರ್ಟ್ ಇದೇ ವರ್ಷದ ಫೆಬ್ರವರಿ 15 ಮತ್ತು ಮಾರ್ಚ್ 11 ರಂದು ನೀಡಿದ ಆದೇಶದ ಅನುಸಾರ, ಎಸ್ ಬಿಐ ಚುನಾವಣಾ ಬಾಂಡ್ ಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ. ಮಾರ್ಚ್ 12 ರಂದು ಎಸ್ ಬಿಐ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ ಗಳ ಬಗ್ಗೆ ಮಾಹಿತಿ ನೀಡಿತ್ತು. ಆಯೋಗ ಇಂದು ತನ್ನ ವೆಬ್ ಸೈಟ್ ನಲ್ಲಿ ಆ ಮಾಹಿತಿಯನ್ನು ಪ್ರಕಟಿಸಿದೆ. ಎಸ್ ಬಿಐನಿಂದ ಪಡೆದ ಮಾಹಿತಿಯನ್ನು url: https://www.eci.gov.in/candidate-politicalparty ” ನಲ್ಲಿ ಲಭ್ಯವಿದೆ ಎಂದು ಚುನಾವಣಾ ಆಯೋಗ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಚುನಾವಣಾ ಬಾಂಡ್‌ಗಳನ್ನು ರಿಡೀಮ್ ಮಾಡಿದ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಎಪಿ ಮತ್ತು ಸಮಾಜವಾದಿ ಪಕ್ಷ ಸೇರಿವೆ.

ಚುನಾವಣಾ ಸಮಿತಿ ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್, ಸುಲಾ ವೈನ್, ವೆಲ್ಸ್ಪನ್ ಮತ್ತು ಸನ್ ಫಾರ್ಮಾ ಸೇರಿವೆ.

ಫೆಬ್ರವರಿ 15 ರಂದು ಐವರು ನ್ಯಾಯಾಧೀಶರನ್ನೊಳ ಗೊಂಡ ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ, ಅನಾಮಧೇಯರಿಂದ ರಾಜಕೀಯ ದೇಣಿಗೆಯನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು “ಅಸಂವಿಧಾನಿಕ” ಎಂದು ಕರೆದಿದ್ದ ಸುಪ್ರೀಂಕೋರ್ಟ್, ದಾನಿಗಳಿಂದ ಪಡೆದ ದೇಣಿಗೆ ನೀಡಿದ ಮೊತ್ತವನ್ನು ಬಹಿರಂಗಪಡಿಸಲು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.

Leave a Reply

Your email address will not be published. Required fields are marked *

error: Content is protected !!