ಚುನಾವಣಾ ಬಾಂಡ್ಗಳ ಮೂಲಕ 400ಕೋಟಿ ರೂ. ಸಂಗ್ರಹಿಸಲು ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಖರ್ಗೆ
ನವದೆಹಲಿ: ಇಡಿ ಮತ್ತು ಸಿಬಿಐನಂತಹ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸಿ 45 ಕಂಪನಿಗಳಿಂದ ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿ 400 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇದ್ದರೆ ಈ ಕುರಿತು ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದೆ.
ಕೇಂದ್ರ ಸರ್ಕಾರ ತನ್ನ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ. ತನಿಖಾ ಸಂಸ್ಥೆಗಳು ದಾಳಿ ನಡೆಸಿದ ಬಳಿಕ ಬಿಜೆಪಿಗೆ ಇನ್ನೂ 15 ಕಂಪನಿಗಳು ದೇಣಿಗೆ ನೀಡಿರುವುದು ತಾಜಾ ತನಿಖೆಯಿಂದ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಇದು ಹೆಚ್ಚು ದೇಣಿಗೆ ಪಡೆಯಲು ಮಾಡಿದ ಬ್ಲ್ಯಾಕ್ಮೇಲ್,ಸುಲಿಗೆ,ಲೂಟಿ ಮತ್ತು ದಬ್ಬಾಳಿಕೆಯೇ? ತಾಜಾ ತನಿಖೆಯ ಪ್ರಕಾರ ಇನ್ನೂ 15 ಕಂಪನಿಗಳು ಇಡಿ, ಸಿಬಿಐ, ಐಟಿ ದಾಳಿಗಳ ನಂತರ ಬಿಜೆಪಿಗೆ ದೇಣಿಗೆ ನೀಡಿವೆ. ಒಟ್ಟು 45 ಕಂಪನಿಗಳು ಬಿಜೆಪಿಗೆ ಸುಮಾರು 400 ಕೋಟಿ ರೂ. ದೇಣಿಗೆ ನೀಡಿವೆ ಎಂದು ಖರ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, 4 ಶೆಲ್ ಕಂಪನಿಗಳು ಬಿಜೆಪಿಗೆ ಹಣ ನೀಡಿವೆ. ಸರ್ವಾಧಿಕಾರಿ ಮೋದಿ ಸರ್ಕಾರವು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಆದರೆ ತಾನು ಮಾತ್ರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಹಣ ಸಂಗ್ರಹಿಸುತ್ತಿದೆ” ಎಂದು ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿಗೆ ‘ಪ್ರಜಾಪ್ರಭುತ್ವದ’ ಬಗ್ಗೆ ಕಾಳಜಿ ಇದ್ದರೆ ಸ್ವತಂತ್ರ ತನಿಖೆಯ ಮೂಲಕ ತನ್ನ ಸ್ವಂತ ಹಣಕಾಸಿನ ವ್ಯವಹಾರದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.