ನನ್ನ ಜೊತೆ ಬಿಜೆಪಿ ಸೇರಿದ್ದ ಹೆಚ್ಚಿನವರು ವಾಪಸು ಬರುತ್ತಾರೆ- ಜಯಪ್ರಕಾಶ್ ಹೆಗ್ಡೆ

ಉಡುಪಿ: ಕರ್ನಾಟಕ ಹಿಂದುಳಿದವರ್ಗಗಳ ಆಯೋಗ ಸರಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಗೆ ಸಂಬಂಧಿಸಿ ಮಾಡಿರುವ ಕೆಲಸದ ಬಗ್ಗೆ ತೃಪ್ತಿ ಇದೆ. ವರದಿಯ ಬಗ್ಗೆ ಎಲ್ಲ ಕಡೆಗಳಲ್ಲಿ ಚರ್ಚೆ ಆಗುತ್ತಿದೆ. ಸರಕಾರ ಈ ವರದಿಯನ್ನು ಸ್ವೀಕರಿಸಿದ್ದರೆ ಲಾಭವಾಗುತ್ತಿತ್ತು ಎಂದು ಅನಿಸುತ್ತದೆ. ಆದರೆ ಈ ವಿಚಾರ ಸರಕಾರದ ತೀರ್ಮಾನಕ್ಕೆ ಬಿಟ್ಟದ್ದಾಗಿದೆ ಎಂದು ಆಯೋಗದ ನಿಕಟಪೂರ್ವ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಳಿಕ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಗುರುವಾರ ಮೊದಲ ಬಾರಿ ಭೇಟಿ ನೀಡಿದ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಅನಾಥ ಮಕ್ಕಳ ಬಗ್ಗೆ ನಾನೊಂದು ವರದಿ ಕೊಟ್ಟಿದ್ದೇನೆ. ಅದನ್ನು ಅತಿ ಶೀಘ್ರ ಜಾರಿಗೆ ತರುವಂತೆ ಕೇಳಿದ್ದೇನೆ. ಸಂಪೂರ್ಣ ವರದಿಯನ್ನು ಜಾರಿಗೆ ತಂದರೆ ತುಂಬಾ ಸಂತೋಷವಾಗುತ್ತದೆ. ಅನೇಕ ಹಿಂದುಳಿದ ಜಾತಿಗಳಿಗೆ ಪಟ್ಟಿಯಲ್ಲಿ ಇರುವುದೇ ಗೊತ್ತಿರಲಿಲ್ಲ. ಅನೇಕ ಜನರಿಗೆ ನಮಗೆ ಮೀಸಲಾತಿ ಸಿಗುತ್ತದೆ ಎಂಬುದು ಕೂಡ ಗೊತ್ತಿಲ್ಲ ಎಂದರು.

ವೀರಶೈವ ಲಿಂಗಾಯತರು ತಮಗೆ ಮೀಸಲಾತಿ ಇಲ್ಲ ಎಂದೇ ಭಾವಿಸಿದ್ದರು. ಅವರಿಗೆ ತಾವು ಪ್ರವರ್ಗ ಮೂರರಲ್ಲಿ ಬರುತ್ತೇವೆ ಎಂಬುದು ಕೂಡ ಗೊತ್ತಿರಲಿಲ್ಲ. ಅನೇಕ ಸಣ್ಣ ಪುಟ್ಟ ಜಾತಿಗಳು ಪಟ್ಟಿಯಲ್ಲಿ ಇರಲಿಲ್ಲ. ಎಷ್ಟು ಜಾತಿಗಳು ಮೀಸಲಾತಿಗೆ ಒಳಪಟ್ಟಿಲ್ಲ ಎಂಬುದು ಇದರಿಂದ ಗೊತ್ತಾಗಿದೆ ಎಂದು ಅವರು ಹೇಳಿದರು.

ಟಿಕೆಟ್ ಯಾವಾಗ ಘೋಷಣೆಯಾಗುತ್ತೆ ಎಂಬುದನ್ನು ಪಕ್ಷದ ಮುಖಂಡರಿಗೆ ಕೇಳಬೇಕು. ನನಗೆ ಟಿಕೆಟ್ ನೀಡುವ ಕುರಿತು ಸಿದ್ದರಾಮಯ್ಯ ಜೊತೆ ಯಾವುದೇ ಚರ್ಚೆ ಮಾಡಿಲ್ಲ ಎಂದ ಅವರು, ಮುಖ್ಯಮಂತ್ರಿ ಜೊತೆ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಜಿಲ್ಲೆಯ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಪರಿಹಾರ ಬೇಕು. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಜಂಟಿ ಸರ್ವೆ ಪ್ರಾರಂಭ ಆಗಿದೆ. ಕರಾವಳಿ ಭಾಗದಲ್ಲೂ ನಡೆದರೆ ರೈತರಿಗೆ ಸಹಾಯ ಆಗುತ್ತದೆ ಎಂದರು.

ಬಿಜೆಪಿ ಅಭ್ಯರ್ಥಿ ಘೋಷಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರ ಕೆಲಸವನ್ನು ಮಾಡುತ್ತದೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಪಕ್ಷದ ಕೆಲಸ ಶುರು ಮಾಡಿದ್ದೇವೆ. ಜಾತಿಯ ಬಗ್ಗೆ ಚರ್ಚೆ ಮಾಡುವುದು ಕಡಿಮೆ ಮಾಡಿದಷ್ಟು, ಸೌಹಾರ್ದಯುತ ವಾಗಿ ಕೆಲಸ ಮಾಡಬಹುದು ಎಂದು ಅವರು ತಿಳಿಸಿದರು.

ನನ್ನ ಜೊತೆ ಬಿಜೆಪಿ ಸೇರಿದ್ದ ಹೆಚ್ಚಿನವರು ವಾಪಸು ಬರುತ್ತಾರೆ. ಒಂದೇ ಸಲ ಎಲ್ಲರನ್ನೂ ಕರೆದುಕೊಂಡು ಬರಲು ಸಾಧ್ಯ ಇಲ್ಲ. ಕೆಲವರು ಬಿಜೆಪಿಯಲ್ಲಿ ಇದ್ದು ಕೊಂಡೆ ನನಗೆ ಸಹಾಯ ಮಾಡಬಹುದು. ಕೆಲವರು ಅವರ ರಾಜಕೀಯ ಭವಿಷ್ಯ ನೋಡಿಕೊಳ್ಳಬಹುದು. ಯಾರಿಗೂ ಒತ್ತಡ ಹಾಕಿ ಬನ್ನಿ ಎಂದು ಹೇಳುವುದು ಸರಿಯಾಗುವುದಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

‘ಪಕ್ಷ ತೊರೆದ ನಂತರವೂ ನಾನು ನಾಯಕರ ಜೊತೆ ಸಂಪರ್ಕದಲ್ಲಿ ಇದ್ದೆ. ಕಾಂಗ್ರೆಸ್ ಸ್ನೇಹಿತರ ಜೊತೆ ಸ್ನೇಹ ಬಿಟ್ಟಿಲ್ಲ. ರಾಜಕೀಯ ಹೊರತಾಗಿಯೂ ಒಂದು ಜೀವನ ಇದೆ ಎಂಬುದನ್ನು ಎಲ್ಲರೂ ಅರ್ಥಮಾಡಿ ಕೊಳ್ಳಬೇಕು. ಜನರ ಅಭಿವೃದ್ಧಿ ಕಾರ್ಯಕ್ಕೆ ನಾವೆಲ್ಲರೂ ಒಟ್ಟಾಗುತ್ತಿದ್ದೆವು. ನಾನು ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಬೇಕು. ಎಲ್ಲರೂ ಜೊತೆಯಾಗಿ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಗೆಲ್ಲಲು ಎಲ್ಲರೂ ಪ್ರಯತ್ನಿಸಬೇಕು. ಎರಡು ಜಿಲ್ಲೆಯ ಪದಾಧಿಕಾರಿಗಳನ್ನು ಒಟ್ಟು ಸೇರಿಸಿ ಒಂದು ಕಾರ್ಯಕ್ರಮ ಮಾಡಬೇಕಾಗಿದೆ:- ಜಯಪ್ರಕಾಶ್ ಹೆಗ್ಡೆ

ಕಾಂಗ್ರೆಸ್ ಭವನಕ್ಕೆ ಹೆಗ್ಡೆ ಭೇಟಿ: ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಳಿಕ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಗುರುವಾರ ಮೊದಲ ಬಾರಿ ಭೇಟಿ ನೀಡಿದ ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ ಮುಖಂಡರು ಬರ ಮಾಡಿಕೊಂಡರು.

ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೆಗ್ಡೆ ಅವರೊಂದಿಗೆ ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಉದ್ಯಾವರ ನಾಗೇಶ್, ಭಾಸ್ಕರ ರಾವ್ ಕಿದಿಯೂರು, ಗೀತಾ ವಾಗ್ಳೆ, ಸದಾಶಿವ ಅಮೀನ್, ದಿನೇಶ್ ಪುತ್ರನ್, ಮಹಾಬಲ ಕುಂದರ್, ಕೇಶವ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!