ಶಿಬರೂರು ನೂತನ ದ್ವಾರಕ್ಕೆ ಶಿಲಾನ್ಯಾಸ
ಸುರತ್ಕಲ್: ಕಟೀಲು ಉಲ್ಲಂಜೆ ಕ್ರಾಸ್ ಬಳಿ ಸುಧಾಕರ ಶೆಟ್ಟಿ ಮೊಗ್ರೋಡಿ ಕನ್ ಸ್ಟ್ರಕ್ಷನ್ ಸೇವಾರೂಪವಾಗಿ ನಿರ್ಮಿಸುತ್ತಿರುವ ನೂತನ ಸ್ವಾಗತ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ನೆರವೇರಿತು.
ಧಾರ್ಮಿಕ ವಿಧಿ ವಿಧಾನವನ್ನು ಶಿಬರೂರು ವೇದವ್ಯಾಸ ತಂತ್ರಿಯವರು ನೆರವೇರಿಸಿದರು. ಬಳಿಕ ಮಾತಾಡಿದ ಅವರು, “ಮೊಗ್ರೋಡಿ ಕನ್ ಸ್ಟ್ರಕ್ಷನ್ ಸಂಸ್ಥೆಯು ಕಟೀಲು ಶ್ರೀದೇವಿಯ ಉತ್ಸವ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವದ ಭೇಟಿಗೆ ತೆರಳುವ ದಾರಿಯಲ್ಲಿ ಭವ್ಯವಾದ ಸ್ವಾಗತ ಗೋಪುರ ನಿರ್ಮಿಸಲು ಮುಂದಾಗಿರುವುದು ಸಂತಸದ ವಿಚಾರ. ಸೇವಾಕರ್ತರ ಇಚ್ಛೆಯಂತೆ ಏಪ್ರಿಲ್ 20ರ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಗೋಪುರ ಲೋಕಾರ್ಪಣೆಗೊಳ್ಳಲಿ. ಭಗವದ್ಭಕ್ತರ ಆಸೆಯನ್ನು ಕಟೀಲು ದುರ್ಗೆ ಹಾಗೂ ಶಿಬರೂರು ಕೊಡಮಣಿತ್ತಾಯ ದೈವ ಈಡೇರಿಸಲಿ” ಎಂದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಶ್ರೀಹರಿನಾರಾಯಣ ದಾಸ ಅಸ್ರಣ್ಣರು ಸೇವಾಕರ್ತರು ಹಾಗೂ ಇಂಜಿನಿಯರ್ ಗಳಿಗೆ ಪೂಜಾ ಪ್ರಸಾದ ವಿತರಿಸಿ ಶುಭಾಶೀರ್ವಾದಗೈದರು. ಈ ಸಂದರ್ಭದಲ್ಲಿ ಶಿಬರೂರು ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಪ್ರದ್ಯುಮ್ನ ರಾವ್ ಕೈಯೂರುಗುತ್ತು, ತುಕರಾಮ ಶೆಟ್ಟಿ ಪರ್ಲಬೈಲ್ ಗುತ್ತು, ಜಿತೇಂದ್ರ ಶೆಟ್ಟಿ ಕೋರ್ಯಾರು ಗುತ್ತು, ಸುಬ್ರಮಣ್ಯ ಪ್ರಸಾದ್ ಕೊರ್ಯಾರ್, ಮಧುಕರ ಅಮೀನ್, ಚಂದ್ರಹಾಸ್ ಶಿಬರೂರು, ವಿನೀತ್ ಶೆಟ್ಟಿ ಕೋರ್ಯಾರು ಹೊಸಮನೆ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಮುಗ್ರೋಡಿ ಸೇವಾಕರ್ತರಾದ ಸುಶಾಂತ್ ಶೆಟ್ಟಿ, ಸುಧಾಕರ ಶಿಬರೂರು, ಇಂಜಿನಿಯರ್ ಸುಬ್ರಮಣ್ಯ, ವಿಜಯರಾಜ್, ದಿನೇಶ್ ಕುಲಾಲ್ ಅಡು ಮನೆ, ರಾಜೇಶ್ ಕುಲಾಲ್, ಪ್ರಸಾದ್ ಕುಲಾಲ್, ನಾರಾಯಣ ಕುಲಾಲ್, ಪ್ರಭಾಕರ ಶೆಟ್ಟಿ ಹೊಸಕಟ್ಟ, ಜಗದೀಶ್ ಶೆಟ್ಟಿ, ಸುದೀಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯುತ್ ದೀಪಾಲಂಕಾರ ಮುಹೂರ್ತ
ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ವಿದ್ಯುತ್ ದೀಪಾಲಂಕಾರ ಮುಹೂರ್ತ ಶ್ರೀಕ್ಷೇತ್ರದಲ್ಲಿ ತಿಬಾರಗುತ್ತಿನಾರ್ ಉಮೇಶ ಎನ್ ಶೆಟ್ಟಿ ಇವರ ನೇತೃತ್ವದಲ್ಲಿ ಊರ ಗಣ್ಯರ ಸಮಕ್ಷಮದಲ್ಲಿ ನೆರವೇರಿತು. ಅಲಂಕಾರ ಹಾಗೂ ಚಪ್ಪರ ವ್ಯವಸ್ಥೆಯ ಗುತ್ತಿಗೆದಾರ ಪ್ರಕಾಶ್ ಭಟ್ ಕೃಷ್ಣಾಪುರ ಉಪಸ್ಥಿತರಿದ್ದರು