ಸಂಸದ ಅನಂತ್ ಕುಮಾರನ್ನು ಭಾರತದಿಂದ ಗಡಿಪಾರು ಮಾಡಿ: ಜಯನ್ ಮಲ್ಪೆ

ಉಡುಪಿ: ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನವನ್ನು ಆಗಾಗ ಬದಲಾಯಿಸುವ ಹೇಳಿಕೆಗಳನ್ನು ನೀಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆಯನ್ನು ಭಾರತದಿಂದ ಗಡಿಪಾರು ಮಾಡುವಂತೆ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಇ ಮೇಲ್ ಮತ್ತು ಫ್ಯಾಕ್ಸ್ ಸಂದೇಶದ ಮೂಲಕ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಸಮಿತಿ ಸದಸ್ಯ,ದಲಿತ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಲಗೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಸಂವಿಧಾನ ತಿದ್ದುಪಡಿಗೆ ಸಂಸತ್ತಿನಲ್ಲಿ 400ಕ್ಕೂ ಹೆಚ್ಚು ಸೀಟುಗಳು ಬೇಕು. ಕನಿಷ್ಠ 20 ರಾಜ್ಯದಲ್ಲಾದರೂ ನಾವು ಅಧಿಕಾರ ಪಡೆಯಬೇಕಿದೆ. ಸಂಪೂರ್ಣ ಬಹುಮತ ಸಿಕ್ಕಿದ ಮೇಲೆ ಇರೋದು ಮಾರಿಹಬ್ಬ ಎಂದು ಹೇಳಿರುವುದು ಖಂಡನೀಯ ಮತ್ತು ದೇಶದ್ರೋಹಿ ಹೇಳಿಕೆ ಎಂದಿದ್ದಾರೆ.

ಸಂವಿಧಾನವು ಭಾರತದ ಜನತೆಗೆ ನೀಡುವ ಧಾರ್ಮಿಕ ಆಚರಣೆಯ, ಅಭಿವ್ಯಕ್ತಿಯ ಸ್ವಾತಂತ್ರ್ಯದ ನೆಲೆಗಳು ಅನಂತ ಹೆಗಡೆಯಂತ ಮಾನಸಿಕ ರೋಗಿಯ ಹೇಳಿಕೆಯಿಂದ ದಾಳಿಗೊಳಗಾಗುತ್ತಿದ್ದರೂ, ತಳಮಟ್ಟದಲ್ಲಿ ಇಂತಹ ಅಯೋಗ್ಯರನ್ನು ನಿಯಂತ್ರಿಸಲು ಕೇಂದ್ರ ಸರಕಾರ ವಿಫಲವಾಗುತ್ತಿರುವುದು ಸಮಾಜದ ಭೌತಿಕ ವಿಭಜನೆಗೆ ಎಡೆಮಾಡಿಕೊಡುತ್ತಿರುವುದು ದುರಂತವಾಗಿದೆ ಎಂದಿರುವ ಜಯನ್ ಮಲ್ಪೆ.
ನಮ್ಮ ಸಂವಿಧಾನ ವಿಫಲವಾಗಿಲ್ಲ. ಈ ದೇಶದ ಸನಾತನ ಧರ್ಮಿಯರು ಸಂವಿಧಾನವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.ಇವರು ಸಂವಿಧಾನ ಸ್ಪೂರ್ತಿಯಂತೆ ನಡೆದುಕೊಳ್ಳುತ್ತಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಂವಿಧಾನವನ್ನು ದೂಷಿಸುವ ಸಂಸದ ಅನಂತಕುಮಾರ್ ಹೆಗಡೆಯ ಸಂತತಿಯನ್ನು ಭಾರತದಿಂದ ಕೂಡಲೇ ಗಡಿಪಾರು ಮಾಡದಿದ್ದರೆ ಈ ದೇಶದ ಮೂಲನಿವಾಸಿಗಳು ತಕ್ಕ ಉತ್ತರ ನೀಡಲಿದ್ದಾರೆ ಎಂದು ಜಯನ್ ಮಲ್ಪೆ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಕಳುಹಿಸಿದ ಸಂದೇಶದಲ್ಲಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!