ವಾರಾಹಿ ಯೋಜನೆಯ ದಾರಿಯನ್ನೇ ತಪ್ಪಿಸಿ, ಕುಡಿಯುವ ನೀರಿನ ಯೋಜನೆಯಾಗಿ ಪರಿವರ್ತನೆ: ಪ್ರತಾಪ್ ಚಂದ್ರ ಶೆಟ್ಟಿ
ಕುಂದಾಪುರ: ತಾಲೂಕಿನ ವಾರಾಹಿ ತಟದಲ್ಲಿರುವ ಸುಮಾರು 2 ಸಾವಿರ ರೈತರಿಗೆ ಜನವರಿ ನಂತರ ತೋಟಕ್ಕೆ ನೀರು ಸಿಗದಿರುವ ಪರಿಸ್ಥಿತಿ ಬರಬಹುದು. ಈ ಬಗ್ಗೆ ಶಾಸಕರು, ಅಧಿಕಾರಿಗಳನ್ನು ನಂಬಿ ಕುಳಿತರೆ ತೋಟ ಒಣಗುತ್ತದೆ. ರೈತರು ಈ ಬಗ್ಗೆ ಧ್ವನಿಯೆತ್ತಿದರೆ ರೈತ ಸಂಘ ಅವರೊಂದಿಗೆ ಖಂಡಿತ ನಿಲ್ಲುತ್ತದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪ ಚಂದ್ರ ಶೆಟ್ಟಿ ಹೇಳಿದ್ದಾರೆ.
ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮತ್ಸ್ಯ ಜ್ಯೋತಿ ಸಭಾಂಗಣದಲ್ಲಿ ರವಿವಾರ ಉಡುಪಿ ಜಿಲ್ಲಾ ರೈತ ಸಂಘ ತ್ರಾಸಿ ವಲಯದ ನೇತೃತ್ವದಲ್ಲಿ ನಡೆದ ಜಿಲ್ಲಾ ರೈತ ಮುಖಂಡರು ಹಾಗೂ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಾರಾಹಿ ನೀರಾವರಿಯ ಮೂಲ ಯೋಜನೆಯಲ್ಲಿ ಬೈಂದೂರು, ಕುಂದಾಪುರ, ಬ್ರಹ್ಮಾವರ ಹಾಗೂ ಅಲ್ಪ ಪ್ರಮಾಣ ಕಾರ್ಕಳಕ್ಕೆ ನೀರು ಕೊಂಡೊಯ್ಯುವುದಾಗಿ ತ್ತು. ಇದು ಉಭಯ ಜಿಲ್ಲೆಯಲ್ಲಿ ರೈತರಿಗಾಗಿ ಮಾಡಿದ ಏಕೈಕ ಯೋಜನೆ ಯಾಗಿತ್ತು. ಆದರೆ ವಾರಾಹಿ ನೀರಾವರಿ ಯೋಜನೆಯ ದಾರಿಯನ್ನೇ ತಪ್ಪಿಸಿ, ಕುಡಿಯುವ ನೀರಿನ ಯೋಜನೆಯಾಗಿ ಪರಿವರ್ತಿಸಿ, ಕಾರ್ಕಳ, ಉಡುಪಿ, ಕಾಪು, ಬೈಂದೂರು, ಶಿರೂರುವರೆಗೆ ಪೂರೈಸಲಾಗುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಅಲ್ಲಿಯೂ ನದಿಗಳಿವೆ. ವೆಂಟೆಡ್ ಡ್ಯಾಂಗಳಿದ್ದರೂ, ವಾರಾಹಿಯೇ ಯಾಕೆ ಬೇಕು? ಈ ಬಗ್ಗೆ ರೈತರು ಪ್ರಶ್ನೆ ಕೇಳದಿದ್ದರೆ ನಮಗೆ ನೀರಿಲ್ಲದ ಪರಿಸ್ಥಿತಿ ಬರುವ ದಿನ ದೂರವಿಲ್ಲ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಆರಂಭದಲ್ಲಿ 2-3 ಕೋ.ರೂ. ಅವ್ಯವಹಾರ ಆಗಿರುವುದಾಗಿ ಮಾಹಿತಿ ಇತ್ತು. ಆ ಬಳಿಕ 14 ಕೋ.ರೂ. ಭ್ರಷ್ಟಾಚಾರ ನಡೆದಿರುವುದು ದಾಖಲೆ ಲಭ್ಯವಾಗಿದೆ. ಆದರೆ ಅನಂತರ ಇದರ ಬಗ್ಗೆ ತನಿಖೆಗಳು ನಡೆದಾಗ ಇನ್ನೂ 5 ಕೋ.ರೂ. ಅವ್ಯವಹಾರ ನಡೆದಿರುವುದು ಕಂಡು ಬಂದಿದ್ದು, ಒಟ್ಟಾರೆ 19 ಕೋ.ರೂ. ಗೂ ಮಿಕ್ಕಿ ಮೊತ್ತದ ಅವ್ಯವಹಾರ ನಡೆದಿದೆ. ಈ ಕುರಿತಂತೆ ನಾವು ರೈತ ಸಂಘದಿಂದ ಕೋರ್ಟ್ ಮೂಲಕ ಹೋರಾಟ ಮಾಡುತ್ತಿದ್ದೇವೆ. ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ಮಾಡುತ್ತೇವೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಹೇಳಿದರು.
ಮುಖಂಡರಾದ ಬಾಬು ಹೆಗ್ಡೆ, ಕಂಬದಕೋಣೆಯ ಪ್ರಕಾಶ್ಚಂದ್ರ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಸೌಕೂರು ಶರತ್ ಕುಮಾರ್ ಶೆಟ್ಟಿ, ಸೀತಾರಾಮ ಗಾಣಿಗ, ಮಲ್ಯಾಡಿ ಶಿವರಾಮ ಶೆಟ್ಟಿ, ಮೊಳಹಳ್ಳಿ ದಿನೇಶ್ ಹೆಗ್ಡೆ, ಕೃಷ್ಣದೇವ ಕಾರಂತ, ಕೃಷ್ಣರಾಜ ಶೆಟ್ಟಿ ಚೋರಾಡಿ, ಬೋಜ ಕುಲಾಲ್, ಡಾ| ಸಚ್ಚಿದಾನಂದ ವೈದ್ಯ, ಜಯರಾಮ ಶೆಟ್ಟಿ ಬೆಳ್ವೆ, ಅಶೋಕ ಪೂಜಾರಿ ಬೀಜಾಡಿ, ಚಂದ್ರಶೇಖರ ಶೆಟ್ಟಿ, ವಸಂತ ಹೆಗ್ಡೆ ಬೈಂದೂರು ಮತ್ತಿತರರು ಉಪಸ್ಥಿತರಿದ್ದರು.
ತ್ರಾಸಿ ವಲಯದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂಡ್ಸೆ ವಲಯಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ಸುಬ್ರಹ್ಮಣ್ಯ ಪಡುಕೋಣೆ, ಪ್ರತಾಪ್ ನಿರೂಪಿಸಿದರು.