ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮ: ಜಿಲ್ಲಾ ನ್ಯಾಯಾಧೀಶರಿಂದ ಚಾಲನೆ

ಉಡುಪಿ, ಅ. 17: ಉಡುಪಿ ಜಿಲ್ಲೆಯಲ್ಲಿನ ಕೋವಿಡ್-19 ಕೊರೋನಾ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯಾಂಗ ಇಲಾಖೆ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ವಕೀಲರ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ, ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ಚಾಲನೆ ನೀಡಿದರು.

ಈ ಜನಾಂದೋಲನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿನ ಪ್ರತೀ ಮನೆಗೂ ಭೇಟಿ ನೀಡಿ, ಕೋವಿಡ್ ಕುರಿತು ಅರಿವು ಮೂಡಿಸುವುದರ ಜೊತೆಗೆ ಕೋವಿಡ್ ನಿಯಂತ್ರಣಕ್ಕಾಗಿ ಮನೆಯವರಿಂದ ಪ್ರತಿಜ್ಞೆ ಮಾಡಿಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಕೋವಿಡ್‌ಗೆ ಪೂರ್ಣ ಪ್ರಮಾಣದ ಲಸಿಕೆ ಬರುವವರೆಗೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು ಮತ್ತು ಆಗಾಗ್ಗೆ ಸುರಕ್ಷಿತ ಕೈ ತೊಳೆಯುವ ವಿಧಾನಗಳನ್ನು ಅನುಸರಿಸಬೇಕು, ಇಡೀ ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಪ್ರತೀ ಮನೆಗೆ ಮಾಹಿತಿ ತಲುಪಿಸಲಾಗುವುದು, ಕುಟುಂಬನ್ನು ಕೋವಿಡ್‌ನಿಂದ ರಕ್ಷಿಸುವುದು ಪ್ರತಿಯೊಬ್ಬ ಕುಟುಂಬ ಸದಸ್ಯನ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್‌ನಿಂದ ಇದುವರೆಗೆ 172 ಮಂದಿ ಮೃತಪಟ್ಟಿದ್ದು, ಅದರಲ್ಲಿ ಶೇ. 75 ಕ್ಕಿಂತ ಹೆಚ್ಚು ಸಾವುಗಳು 60 ವರ್ಷ ಮೇಲ್ಪಟ್ಟ ಹಾಗೂ ಇತರೆ ಖಾಯಿಲೆಗಳಿಂದ ಬಳಲುತ್ತಿದ್ದ ವ್ಯಕ್ತಿಗಳದಾಗಿದ್ದು, ಹಿರಿಯ ನಾಗರೀಕರಿಗೆ ಕೋವಿಡ್‌ನಿಂದ ಹೆಚ್ಚಿನ ಅಪಾಯವಿದ್ದು, ಮನೆಯಲ್ಲಿನ ಹಿರಿಯರ ಆರೋಗ್ಯದ ಜವಾಬ್ದಾರಿ ಪ್ರತಿಯೊಬ್ಬ ಕುಟುಂಬ ಸದಸ್ಯರ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಜನಾಂದೋಲನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ, ಆದರೆ ರೋಗ ಹರಡದಂತೆ ತಡೆಯುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದ್ದು, ಸರಿಯಾದ ಕ್ರಮದಲ್ಲಿ ಮಾಸ್ಕ್ ಅಳವಡಿಕೆ, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯವಾಗಿ ಅನುಸರಿಸಬೇಕಿದ್ದು, ಕೋವಿಡ್ ಕೊನೆಗಾಣಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಆರೋಗ್ಯ ಇಲಾಖೆ ವತಿಯಿಂದ ಹೊರತಂದ ಕೋವಿಡ್ ೧೯ ಮಾಹಿತಿ ಕುರಿತ ಸ್ಟಿಕರ್‌ನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ, ನ್ಯಾ.ವಿವೇಕಾನಂದ ಎಸ್ ಪಂಡಿತ್, ನ್ಯಾ.ಲಾವಣ್ಯ, ನ್ಯಾ.ಭವಾನಿ, ನ್ಯಾ.ಶೋಭಾ, ನ್ಯಾ.ಮಂಜುನಾಥ್, ನ್ಯಾ.ಮಹಾಂತೇಶ್ ಬೂಸಗೋಳ, ನ್ಯಾ.ನಿರ್ಮಲಾ, ಪೋಕ್ಸೋ ನ್ಯಾಯಾಲಯದ ನ್ಯಾ. ಯಾದವ ವನಮಾಲಾ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಡಾ. ಪ್ರೇಮಾನಂದ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರೇಮ್ ಸಾಗರ್, ವಕೀಲರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಸರ್ಕಾರಿ ಅಭಿಯೋಜಕಿ ಶಾಂತಾ ಬಾಯಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಸ್ವಾಗತಿಸಿದರು, ನ್ಯಾಯಾಧೀಶ ಇರ್ಫಾನ್ ವಂದಿಸಿದರು.

ನನ್ನ ಕುಟುಂಬ ನನ್ನ ಜವಾಬ್ದಾರಿ ಜಾಗೃತಿ ಸ್ಟಿಕರ್ ಅಳವಡಿಕೆ

ಉಡುಪಿ ಜಿಲ್ಲೆಯಲ್ಲಿ ಕೋವಿಡ್ -೧೯ ಕುರಿತು ಪ್ರತೀ ಮನೆ ಮನೆಗೆ ಅರಿವು ಮೂಡಿಸಲು ಜಿಲ್ಲಾಡಳಿತ ರೂಪಿಸಿರುವ, ನನ್ನ ಕುಟುಂಬ ನನ್ ಜವಾಬ್ದಾರಿ ಅಭಿಯಾನ ಕಾರ್ಯಕ್ರಮದ ಸ್ಟಿಕರ್‌ನ್ನು, ಜಿಲ್ಲಾ ನ್ಯಾಯಾಲಯದ ಸಮೀಪದ  ವಸತಿ ಸಂಕೀರ್ಣದಲ್ಲಿನ ಮನೆಯ ಬಾಗಿಲಿಗೆ,  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಮತ್ತು ಜಿಲ್ಲಾಧಿಕಾರಿ ಜಿ.ಜಗದೀಶ್ ಅಂಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸ್ಟಿಕರ್‌ನಲ್ಲಿ ಮನೆಯಲ್ಲಿನ ಪ್ರತೀ ಸದಸ್ಯರು ಕೋವಿಡ್ ೧೯ ನಿಂದ ತಮ್ಮ ಕುಟುಂಬವನ್ನು ರಕ್ಷಿಸಲು ಪಾಲಿಸಬೇಕಾದ ಕೋವಿಡ್-೧೯ ನಿಯಂತ್ರಣಾ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಕುಟುಂಬದ ಹಿರಿಯ ಸದಸ್ಯರನ್ನು ಸೋಂಕಿಗೆ ಒಳಗಾಗದಂತೆ ರಕ್ಷಿಸುತ್ತೇನೆ, ಗರ್ಭಿಣಿ ಮಹಿಳೆಯರನ್ನು ಸೋಂಕಿಗೆ ಒಳಗಾಗದಂತೆ ರಕ್ಷಿಸುತ್ತೇನೆ, ಕುಟುಂಬದ ಸದಸ್ಯರಿಗೆ ರೋಗ ಲಕ್ಷಣಗಳಿದ್ದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲು ಬದ್ದನಾಗಿದ್ದೇನೆ, ಕೋವಿಡ್ ೧೯ ಪ್ರಸರಣ ಸರಪಳಿಯನ್ನು ಮೊಟಕುಗೊಳಿಸಲು ನನ್ನ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ಸಹಿ ಮಾಡಿದ ಸ್ವಯಂ ಘೋಷಣಾ ಪ್ರಮಾಣ ಪತ್ರದ ಪ್ರತಿ ಇರುತ್ತದೆ.

ಜಿಲ್ಲೆಯ ಪ್ರತೀ ಮನೆ ಮನೆಗೂ ಈ ಸ್ಟಿಕರ್ ಅಂಟಿಸಿ, ಸಹಿ ಮಾಡಿದ ಸ್ವಯಂ ಘೋಷಣಾ ಪತ್ರವನ್ನು ಪಡೆಯುವ ಹಾಗೂ ಮನೆಯವರಿಂದ ಪ್ರತಿಜ್ಞಾ ಪಡೆಯುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ರೂಪಿಸಿದೆ.


Leave a Reply

Your email address will not be published. Required fields are marked *

error: Content is protected !!