ಬೊಲೆರೋಗೆ ಸ್ಕೂಟಿ ಡಿಕ್ಕಿ: ಹೆಜಮಾಡಿಯ ಯುವಕ ಮೃತ್ಯು- ಮಹಿಳೆ ಗಂಭೀರ

ಉಡುಪಿ: ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂ ಎದುರು ಇಂದು ಬೆಳಗ್ಗೆ ಸಂಭವಿಸಿದ ಅಪಘಾತವೊಂದರಲ್ಲಿ ದ್ವಿಚಕ್ರ ವಾಹನವೊಂದು ನಿಂತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದು, ಆತನ ತಾಯಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ಉಚ್ಚಿಲ ಪೊಲ್ಯ ನಿವಾಸಿ ಅಝೀಜ್ ಎಂಬವರ ಪುತ್ರ ಮುಫ್ರೀನ್ (18) ಎಂದು ಗುರುತಿಸಲಾಗಿದ್ದು, ಆತನ ತಾಯಿ ಹಾಜಿರಾ ಭಾನು ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರವಿವಾರ ಬೆಳಗ್ಗೆ 8.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡಿರುವ ಅಝೀಜ್ ಹೆಜ್ಮಾಡಿಯಲ್ಲಿ ನೆಲೆಸಿದ್ದು, ಇತ್ತೀಚೆಗೆ ಊರಿಗೆ ಬಂದು ವಾಪಾಸಾಗಿದ್ದರು. ಇಂದು ಬೆಳಗ್ಗೆ ಹೆಜ್ಮಾಡಿಯಿಂದ ಮುಫ್ರೀನ್ ತನ್ನ ತಾಯಿಯನ್ನು ಹೈಟೆಕ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದ್ವಿಚಕ್ರ ವಾಹನವೊಂದರಲ್ಲಿ ಕರೆದೊಯ್ಯುತ್ತಿದ್ದ ವೇಳೆ ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂ ಮುಂದೆ ನಿಲ್ಲಿಸಲಾಗಿದ್ದ ಬೊಲೆರೋ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಮುಫ್ರೀನ್ ಗಂಭೀರ ಗಾಯಗೊಂಡಿದ್ದು, ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ಈ ವೇಳೆ ಆತನ ತಾಯಿ ಹಾಜಿರಾ ಭಾನು ಗಂಭೀರ ಗಾಯಗೊಂಡಿದ್ದು, ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತಲೆಯ ಭಾಗಕ್ಕೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!