ವಿಶ್ವಶಾಂತಿಗೆ ಜೈನ ಧರ್ಮ ಕೊಡುಗೆ ಅಪಾರ: ಸಚಿವ ದಿನೇಶ್ ಗುಂಡೂರಾವ್
![](https://udupitimes.com/wp-content/uploads/2024/03/IMG-20240301-WA0160-1024x768.jpg)
ವೇಣೂರು: ವಿಶ್ವದಲ್ಲಿ ಶಾಂತಿ ನೆಲೆಸಲು ಹಾಗೂ ಸಾಮಾರಸ್ಯದ ಬದುಕಿಗೆ ಜೈನಧರ್ಮದ ಕೊಡುಗೆ ಅಪಾರವಾಗಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಶುಕ್ರವಾರ ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ತ್ಯಾಗ, ಸಹನೆಯ ಪ್ರತೀಕವಾಗಿ ಜೈನ ಧರ್ಮವು ಜಗತ್ತಿನಲ್ಲಿ ಅಹಿಂಸೆಯ ಸಂದೇಶ ಹರಡಿದೆ. ಕರ್ನಾಟಕದಲ್ಲಿ ಶ್ರವಣಬೆಳಗೊಳ, ಧರ್ಮಸ್ಥಳ, ಕಾರ್ಕಳ, ವೇಣೂರಿನಲ್ಲಿರುವ ಬಾಹುಬಲಿ ರಾಜ್ಯದ ಶ್ರೀಮಂತ ಸಂಸ್ಕೃತಿ, ಧಾರ್ಮಿಕತೆಯ ಸಂಕೇತವಾಗಿದೆ. ಚಿಕ್ಕಂದಿನಿಂದಲೂ ತಾನು ಹಲವಾರು ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜೀವನದ ಪುಣ್ಯವಾಗಿದೆ ಎಂದು ಅವರು ಹೇಳಿದರು.
ವೇಣೂರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ರಸ್ತೆ ಸೇರಿದಂತೆ ಎಲ್ಲ ಅಗತ್ಯ ಮೂಲಸೌಕರ್ಯವನ್ನು ರಾಜ್ಯ ಸರಕಾರ ಒದಗಿಸಿದೆ. ಮಸ್ತಕಾಭಿಷೇಕಕ್ಕೆ ಅನುದಾನವನ್ನು ನೀಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಸುಧಾಕರ್, ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕ ಪ್ರತಾಪ ಸಿಂಹ ನಾಯಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಮತ್ತಿತರರು ಇದ್ದರು.
ಸಚಿವರು ಬಾಹುಬಲಿ ಮಸ್ತಕಾಭಿಷೇಕ ಕಾರ್ಯಕ್ರಮ ವೀಕ್ಷಿಸಿದರು. ನಂತರ ಮಸ್ತಕಾಭಿಷೇಕ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿರುವ ರಾಜ್ಯ ಸರಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವ ವಸ್ತು ಪ್ರದರ್ಶನವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.