ಅರುಣ್ ಪುತ್ತಿಲ ಸ್ಪರ್ಧೆ ಮಾಡಲಿ- ಮತ್ತೆ ನಾನು ಭಾರಿ ಅಂತರದಿಂದ ಗೆಲ್ಲುತ್ತೇನೆ- ನಳಿನ್ ಕುಮಾರ್ ಕಟೀಲ್

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪುತ್ತಿಲ ಪರಿವಾರದಿಂದ ಅರುಣ್ ಪುತ್ತಿಲ ಅವರು ಸ್ಪರ್ಧೆ ಮಾಡಿದರೆ ಮಾಡಲಿ. ಅವರದ್ದೊಂದು ಸ್ವತಂತ್ರ ಸಂಸ್ಥೆಯಾಗಿದೆ. ಬಿಜೆಪಿಗೆ ಯಾವುದೇ ಎದುರಾಳಿಯಿಲ್ಲ. ಈ ಬಾರಿ ಅತ್ಯಂತ ಹೆಚ್ಚು ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಪುತ್ತಿಲ ಪರಿವಾರದಿಂದ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಸ್ಪರ್ಧೆ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುತ್ತಿಲ ಪರಿವಾರ ಒಂದು ಸ್ವತಂತ್ರ ಸಂಸ್ಥೆಯಾಗಿದೆ. ಆ ಸಂಸ್ಥೆಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆ. ಈಗಾಗಲೇ ಅವರ ಮನವೊಲಿಕೆಗೆ  ಪಾರ್ಟಿ ಪ್ರಯತ್ನ ಮಾಡಿದೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬಹಳ ವರ್ಷಗಳ ಹೋರಾಟದಿಂದ ಅತೀ ದೊಡ್ಡ ಪಾರ್ಟಿಯಾಗಿ ಬೆಳೆದಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಅನ್ನು ಎದುರಿಸಿ ಲೋಕಸಭೆಯಲ್ಲಿ ಅತೀ ಹೆಚ್ಚು ಸೀಟು ಗೆದ್ದಿದೆ. ಹಾಗಾಗಿ, ಪಕ್ಷಕ್ಕೆ ಎದಯರಾಳಿಯ ಪ್ರಶ್ನೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದ್ದು, ಎಲ್ಲರಿಗೂ ಚುನಾವಣೆಗೆ ನಿಲ್ಲುವ ಹಕ್ಕು ಇದೆ. ಪ್ರತೀ ಚುನಾವಣೆ ಬಂದಾಗ ಹತ್ತಾರು ಸಮಸ್ಯೆಗಳು ಉದ್ಭವವಾಗುತ್ತವೆ. ಆ ಎಲ್ಲಾ ಸವಾಲುಗಳನ್ನು ಬಿಜೆಪಿ ಗೆದ್ದು ಗೆಲುವು ಸಾಧಿಸಿದೆ. ರಾಮಮಂದಿರ ನಿರ್ಮಾಣವಾದ ಬಳಿಕ ಬಿಜೆಪಿ ಪರವಾದ ವಾತವರಣ ಅದ್ಭುತವಾಗಿದೆ. ಹಿಂದುತ್ವ, ರಾಷ್ಟ್ರವಾದ ಹಾಗೂ ಅಭಿವೃದ್ಧಿ ವಿಚಾರವಾಗಿ ಜನ ಒಗ್ಗಟ್ಟಾಗುತ್ತಾರೆ. ಇನ್ನು ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ಭಾರೀ ವ್ಯತ್ಯಾಸ ಇದೆ. ಆಗಿನ ಸಮಸ್ಯೆಯೇ ಬೇರೆ, ಈಗಿನ ವಿಚಾರವೇ ಬೇರೆಯಾಗಿದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ಈ ಬಾರಿಯ ಚುನಾವಣೆಯಲ್ಲೂ ಭಾರೀ ಅಂತರದ ಮತಗಳಿಂದ ಗೆಲುವು ಸಾಧಿಸುತ್ತೇನೆ. ಪಕ್ಷದ ಟಿಕೆಟ್ ಕೊಡೋದು, ಬಿಡೋದು ರಾಷ್ಟ್ರೀಯ ನಾಯಕರಿಗೆ ಬಿಟ್ಟ ತೀರ್ಮಾನವಾಗಿದೆ. ಆ ತೀರ್ಮಾನಕ್ಕೆ ಪಕ್ಷದ ಒಬ್ಬ ಕಾರ್ಯಕರ್ತನಾಗಿ ನಾನು ಬದ್ಧನಾಗಿದ್ದೇನೆ ಎಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!