ದಂಪತಿಯಿಂದ ಸೊಸೈಟಿಗಳಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ.ವಂಚನೆ

ಪಡುಬಿದ್ರೆ: ನಕಲಿ ಚಿನ್ನಾಭರಣಗಳನ್ನು ಅಸಲಿ ಎಂಬುದಾಗಿ ನಂಬಿಸಿ ಮೂರು ಸೊಸೈಟಿಗಳಲ್ಲಿ ಅಡವಿಟ್ಟ ಲಕ್ಷಾಂತರ ರೂ. ಸಾಲ ಪಡೆದು ಪಾವತಿಸದೆ ಮೋಸ ಮಾಡಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.

ಆರೋಪಿಗಳನ್ನು ಪಡುಬಿದ್ರೆ ಕಂಚಿನಡ್ಕದ ರಾಘವೇಂದ್ರ ಮಠದ ಬಳಿಯ ನಿವಾಸಿ ರಾಜೀವ್ ಹಾಗೂ ಆತನ ಪತ್ನಿ ಸ್ನೇಹಲತಾ ಎಂದು ಗುರುತಿಸಲಾಗಿದೆ.

ಇವರು ಪಡುಬಿದ್ರಿಯ ಎಸ್.ಕೆ.ಜಿ.ಐ. ಕೋ-ಅಪರೇಟಿವ್ ಸೊಸೈಟಿಯಲ್ಲಿ 2022ರ ಸೆ.1ರಿಂದ ಒಟ್ಟು 182 ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ಅಡವಿಟ್ಟು ಸೊಸೈಟಿಗೆ ನಂಬಿಸಿ 8,08,000ರೂ. ಸಾಲವನ್ನು ಪಡೆದಿದ್ದರು. ಈ ಬಗ್ಗೆ ಸಂಶಯಗೊಂಡ ಸೊಸೈಟಿಯವರು 2024ರ ಫೆ.26ರಂದು ಆರೋಪಿಗಳು ಅಡವಿಟ್ಟ ಚಿನ್ನಾಭರಣಗಳ ಪರಿಶೀಲಿಸಿದಾಗ ನಕಲಿ ಎಂಬುದಾಗಿ ಕಂಡು ಬಂದಿದೆ. ಹೀಗೆ ಆರೋಪಿಗಳು 8,08,000ರೂ. ಸಾಲವನ್ನು ಪಡೆದು ಮರುಪಾವತಿಸದೇ ಸೊಸೈಟಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.

ಅದೇ ರೀತಿ ಇವರು ಉಚ್ಚಿಲದ ಎಸ್‌ಸಿಡಿಸಿಸಿ ಬ್ಯಾಂಕ್ ಉಚ್ಚಿಲ ಶಾಖೆಯಲ್ಲಿ 2023ರ ಮಾ.4ರಿಂದ ಒಟ್ಟು 72.200 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂಬುದಾಗಿ ನಂಬಿಸಿ ಅಡವಿಟ್ಟು 2,86,000 ರೂ. ಸಾಲವನ್ನು ಪಡೆದಿದ್ದರು. ಆರೋಪಿಗಳು ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಡಿ.28 ರಂದು ಏಲಂ ಪ್ರಕ್ರಿಯೆ ನಡೆಸಿದ್ದು, ಬಿಡ್ಡುದಾರ ಬಾಬುರಾಯ ಆಚಾರ್ಯ ಎಂಬವರು 3,18,680 ರೂ.ಗೆ ಈ ಚಿನ್ನಾಭರಣಗಳನ್ನು ಪಡೆದಿದ್ದರು. ಬಳಿಕ ಪರಿಶೀಲಿಸಿದಾಗ ಈ ಚಿನ್ನಾಭರಣಗಳು ನಕಲಿ ಎಂದು ದೃಢಪಟ್ಟಿದೆ. ಹೀಗೆ ಆರೋಪಿಗಳು ಸೊಸೈಟಿಗೆ 2,86,000 ಸಾಲವನ್ನು ಪಡೆದು ಮರು ಪಾವತಿಸದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಈ ದಂಪತಿ ಪಡುಬಿದ್ರೆ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ ಒಟ್ಟು 231 ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂಬುದಾಗಿ ನಂಬಿಸಿ 10,29,000ರೂ. ಮತ್ತು ಸೊಸೈಟಿಯ ಸಿಟಿ ಶಾಖೆಯಲ್ಲಿ ಒಟ್ಟು 188.600ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 9,04,100ರೂ. ಸಾಲವನ್ನು ಪಡೆದು ಮರುಪಾವತಿಸದೇ ಬ್ಯಾಂಕಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!