ಹೆಬ್ರಿ ಕುಚ್ಚೂರು ಮಡಾಮಕ್ಕಿ ರಸ್ತೆಯ ವಿಸ್ತರಣೆ ಕಾಮಗಾರಿಗೆ ಅಡ್ಡಿ: ಗ್ರಾಮಸ್ಥರಿಂದ ರಸ್ತೆ ತಡೆ

ಹೆಬ್ರಿ: ಅರಣ್ಯ ಇಲಾಖೆಯ ಅಧಿಕಾರಿಗಳು ಕಾನೂನಿನ ನೆಪ ಹೇಳಿ ಹೆಬ್ರಿ ಕುಚ್ಚೂರು ಮಡಾಮಕ್ಕಿ ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ನಡೆಸಲು ಅಡ್ಡಿಪಡಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ತೊಡಕು ಮಾಡುತ್ತಿದ್ದಾರೆ ಎಂದು ಮಂಗಳವಾರ ಮಠದಬೆಟ್ಟಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಹೆಬ್ರಿ ತಹಶೀಲ್ಧಾರ್‌ ಎಸ್.ಎ.ಪ್ರಸಾದ್‌, ಹೆಬ್ರಿ ಸಬ್‌ ಇನ್ಸ್‌ ಫೆಕ್ಟರ್‌ ಮಹಾಂತೇಶ್‌ ಜಾಬಗೌಡ, ವನ್ಯಜೀವಿ ವಿಭಾಗದ ಆರ್‌ಎಫ್‌ಓ ಗೌರವ್‌ ಅವರ ಮನವೊಲಿಕೆಗೆ ಬಗ್ಗದ ಪ್ರತಿಭಟನಾಕಾರರು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿಎಫ್ಓ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಲೇಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ವಿಭಾಗದ ಡಿಎಫ್ಓ ಶಿವಾನಂದ ಬಾಬು ರಸ್ತೆಯ ವಿಸ್ತರಣೆ ಅರಣ್ಯ ಇಲಾಖೆಯ ಯಾವೂದೇ ಅಡ್ಡಿಯಿಲ್ಲ. ಫಾರೆಸ್ಟ್‌ ಕ್ಲಿಯರೆನ್ಸ್‌ ಪಡೆದು ರಸ್ತೆ ನಿರ್ಮಿಸಿ ಹೇಳಿದಾಗ, ಕ್ಲಿಯರೆನ್ಸ್‌ ಪಡೆಯದೆ ರಸ್ತೆ ನಿರ್ಮಿಸಿರುವ ಪಿಡ್ಲ್ಯುಡಿ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯ ಹಿರಿಯ ತ್ರಿನೇಶ್ವರ್‌ ಬುಧವಾರವೇ ಫಾರೆಸ್ಟ್‌ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸಿ ಕಾನೂನು ಪ್ರಕಾರವೇ ರಸ್ತೆ ನಿರ್ಮಾಣ ಮಾಡುತ್ತೇವೆ. ಜನತೆಗೆ ಸಮಸ್ಯೆಯಾಗಲು ಬಿಡುವುದಿಲ್ಲ ಎಂದರು. ಸ್ಥಳೀಯ ವ್ಯಕ್ತಿ ಅರಣ್ಯ ಇಲಾಖೆಗೆ ಅರ್ಜಿ ಹಾಕಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಡಕಾಗಿದೆ. ಅರಣ್ಯ ಇಲಾಖೆಯವರು ಅಭಿವೃದ್ಧಿಗೆ ಅಡ್ಡಿ ಮಾಡಿಲ್ಲ, ಸ್ಥಳೀಯರ ದೂರಿನಿಂದಲೇ ಸಮಸ್ಯೆಯಾಗಿದೆ ಎಂದು ಗುತ್ತಿಗೆದಾರ ವಾದಿರಾಜ ಶೆಟ್ಟಿ ಹೇಳಿದರು.
ಲೋಕೋಪಯೋಗಿ ಇಲಾಖೆಯವರ ನಿರ್ಲಕ್ಷವೇ ಸಮಸ್ಯೆಗೆ ಮೂಲ ಕಾರಣ. ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ನಡುವೆ ಹೊಂದಾಣಿಕೆ ಇಲ್ಲದೆ, ಜನತೆಗೆ, ಅಭಿವೃದ್ಧಿ ಕಾಮಗಾರಿಗೆ ತೊಂದರೆಯಾಗುತ್ತಿದೆ. ಇನ್ನಾದರೂ ಸಕಾಲದಲ್ಲಿ ಸಮಸ್ಯೆಗೆ ಸ್ಪಂದಿಸಿ ಎಂದು ಪ್ರತಿಭಟನೆಯ ನೇತ್ರತ್ವ ವಹಿಸಿರುವ ಸಾಮಾಜಿಕ ಕಾರ್ಯಕರ್ತ ಕುಚ್ಚೂರು ಶ್ರೀಕಾಂತ್‌ ಪೂಜಾರಿ ಹೇಳಿದರು.

ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಹೆಬ್ರಿ ಪೊಲೀಸ್ ಸಬ್‌ ಇನ್ಸ್‌ ಫೆಕ್ಟರ್ ಮಹಾಂತೇಶ್ ಮತ್ತು ತಂಡ ಪೊಲೀಸ್ ಬಂದೋಸ್ತ್ ಏರ್ಪಡಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಹೆಬ್ರಿ ತಹಶೀಲ್ದಾರ್ ಪ್ರಸಾದ್ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು. ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಸೇರಿ 300ಕ್ಕೂ ಮಿಕ್ಕಿ ಗ್ರಾಮಸ್ಥರು ಭಾಗವಹಿಸಿದ್ದರು.
……..
ಅರಣ್ಯ ಇಲಾಖೆ ಅಭಿವೃದ್ಧಿಗೆ ತೊಂದರೆ ಮಾಡುವುದಿಲ್ಲ. ಲೋಕೋಪಯೋಗಿ ಇಲಾಖೆಯವರು ಆನ್ ಲೈನ್ ಮೂಲಕ ಫಾರೆಸ್ಟ್‌ ಕ್ಲಿಯರೆನ್ಸ್‌ ಗೆ ಅರ್ಜಿ ಹಾಕಲಿ. ನಾನು ಇಂದೇ ಬೆಂಗಳೂರಿಗೆ ತೆರಳಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂಚಿತವಾಗಿ ಅರಣ್ಯ ಇಲಾಖೆಯಿಂದ ಫಾರೆಸ್ಟ್‌ ಕ್ಲಿಯರೆನ್ಸ್‌ ತಗೊಂಡಿದ್ದರೆ ಸಮಸ್ಯೆ ಬರುತ್ತಿರಲಿಲ್ಲ –

  • ಶಿವಾನಂದ ಬಾಬು. ಡಿಎಫ್ಓ.

Leave a Reply

Your email address will not be published. Required fields are marked *

error: Content is protected !!