ದೇವಾಲಯಗಳ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿಲ್ಲ- ಅರ್ಚಕರ ಒಕ್ಕೂಟ

ಬೆಂಗಳೂರು : ಲೋಕಸಭಾ ಚುನಾವಣಾ ಹತ್ತಿರ ಬರುತ್ತಿದಂತೆ ಬಿಜೆಪಿಯವರು ಜನರ ಭಾವನೆಗಳ ಮೇಲೆ ಅಪಪ್ರಚಾರ ಮಾಡುತ್ತಿದ್ದು, ಬಿಜೆಪಿ ತಿಳಿದಂತೆ ದೇವಾಲಯಗಳಲ್ಲಿ ಸಂಗ್ರಹವಾಗುತ್ತಿರುವ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿಲ್ಲ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಸ್ಪಷ್ಟಪಡಿಸಿದೆ.

ರವಿವಾರ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಪ್ರಧಾನ ಸಲಹೆಗಾರ ರಾಧಾಕೃಷ್ಣ ಮಾತನಾಡಿ, ‘ರಾಜ್ಯದ ಎ ದರ್ಜೆಯ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಈ ಅಭಿವೃದ್ಧಿ ಸಹಿಸಲಾಗದೇ ಬಿಜೆಪಿಯವರು ದೇವಾಲಯಗಳ ಹಣ ಚರ್ಚ್, ಮಸೀದಿಗಳಿಗೆ ಹಣ ಹೋಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಎ ದರ್ಜೆಯ ದೇವಸ್ಥಾನಗಳಲ್ಲಿ ಆಗುತ್ತಿದೆ. ನಿತ್ಯವೂ ಕೋಟ್ಯಂತರ ರೂ. ಹಣ ಸಂಗ್ರಹಣೆ ಆಗುತ್ತಿದ್ದು ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಇದೇ ಕಾರಣ ಇಟ್ಟುಕೊಂಡು ರಾಜ್ಯದ ಎ ದರ್ಜೆಯ ದೇವಾಲಯಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ಸರಕಾರದಿಂದ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದ್ದು, ದೇವಸ್ಥಾನಗಳನ್ನು ರಾಜಕೀಯಕ್ಕೆ ಎಳೆಯುವುದನ್ನು ನಿಲ್ಲಿಸಿ ಎಂದು ಅವರು ಹೇಳಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಎ ಗ್ರೇಡ್ ದೇವಾಸ್ಥಾನಗಳಲ್ಲಿ ನಡೆದ ಕಾಮಗಾರಿ ಸೇರಿದಂತೆ ಇತರೆ ಟೆಂಡರ್ ಗಳನ್ನು ಯಾರಿಗೆ ನೀಡಲಾಗಿತ್ತು ಎಂದು ತನಿಖೆ ನಡೆಸಿದರೆ ಬಿಜೆಪಿಯವರ ಯೋಗ್ಯತೆ ತಿಳಿಯುತ್ತದೆ. ಇದನ್ನು ಮುಚ್ಚಿ ಹಾಕುವುದಕ್ಕಾಗಿ ಬಿಜೆಪಿಯವರು ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಅದನ್ನು ಸಹಿಸಲಾಗದ ಬಿಜೆಪಿ ನಾಯಕರು ದೇವಾಲಯಗಳ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಬಿಜೆಪಿಯವರೇ ದಯವಿಟ್ಟು ಅಪಪ್ರಚಾರ ಮಾಡುವುದನ್ನು ಬಿಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ 50 ವರ್ಷದಿಂದ ಹೋರಾಟ ನಡೆಸುತ್ತಿದ್ದು 42 ಸಾವಿರ ದೇವಾಲಯಗಳು ಬೀದಿ ಪಾಲಾಗಿದ್ದವು. ಅದಕ್ಕೆ ಪರಿಹಾರವಾಗಿ ತಸ್ತಿಕ್ ನೀಡಲಾಗುತ್ತಿದೆ. ನಾವೂ ಆ ಹಣದಲ್ಲಿ ದೇವಾಲಯದ ಪೂಜೆಗಳನ್ನು ಮಾಡಬೇಕು. ರಾಮಲಿಂಗಾ ರೆಡ್ಡಿ ನಮ್ಮ ಹಲವು ಬೇಡಿಕೆ ಈಡೇರಿಸಿದ್ದಾರೆ. ಈ ಹಿಂದಿನ ಸರಕಾರ ನಮಗೆ ತಸ್ತಿಕ್ ಕೊಟ್ಟಿರಲಿಲ್ಲ. ಆದರೆ ಹೊಸ ಸರಕಾರ ಬಂದ ತಕ್ಷಣ ಬೇಡಿಕೆ ಈಡೇರಿದೆ ಎಂದು ಅವರು ತಿಳಿಸಿದರು.

‘ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ತಿರಸ್ಕರಿಸಲಾ ಗಿದೆ. ಮೇಲ್ಮನೆಯಲ್ಲಿ ಪಕ್ಷಾಧಾರಿತವಾಗಿ ಮತಗಳು ಚಲಾವಣೆಯಾಗಿದೆ. ಜೆಡಿಎಸ್, ಕಾಂಗ್ರೆಸ್ ಪಕ್ಷ ಒಂದಾಗಿದ್ದರೆ, ಜೆಡಿಎಸ್‍ನ ಮತಗಳು ಏನಾಗುತ್ತಿದ್ದವು. ಬಿಜೆಪಿ ಮತ್ತು ಜೆಡಿಎಸ್ ಇತ್ತೀಚೆಗೆ ಒಂದಾಗಿರುವ ಹಿನ್ನೆಲೆ ಬಿಜೆಪಿಗೆ ಬಹುಮತ ಸಿಕ್ಕಿದೆ. ಅವರನ್ನು ವೈಯಕ್ತಿಕವಾಗಿ ಪ್ರಶ್ನಿಸಿದರೆ ಫಲಿತಾಂಶ ಬೇರೆಯೇ ಬರುತ್ತದೆ’- ರಾಧಾಕೃಷ್ಣ, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಸಲಹೆಗಾರ

Leave a Reply

Your email address will not be published. Required fields are marked *

error: Content is protected !!