ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇನೆ- ಗೋ ಬ್ಯಾಕ್ ಅಭಿಯಾನಕ್ಕೆ ತಿರುಗೇಟು ನೀಡಿದ ಸಚಿವೆ ಶೋಭಾ
ಚಿಕ್ಕಮಗಳೂರು: ನಮ್ಮ ಪಕ್ಷವೇ ಆಗಲಿ ವಿರೋಧ ಪಕ್ಷವೇ ಆಗಲಿ ಅಭಿವೃದ್ಧಿ ಆಧಾರದಲ್ಲಿ ಚರ್ಚೆಗೆ ಸಿದ್ದ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ. ನಿಜವಾದ ಬಿಜೆಪಿ ಕಾರ್ಯಕರ್ತರು ಈ ರೀತಿ ಆರೋಪವನ್ನು ಮಾಡುವುದಿಲ್ಲ. ಯಾರೋ ಈ ರೀತಿ ಮಾಡಿಸಿದ್ದಾರೆ. ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ಈ ರೀತಿ ಮಾಡಿಸಿರಬಹುದು, ಅವರು ಹಿಂದಿದ್ದ ಪಕ್ಷದಲ್ಲಿ ಇಂತಹ ಚಾಳಿಯನ್ನು ನಡೆಸಿದ್ದಾರೆ. ಇಲ್ಲೂ ನಡೆಸಿದ್ದಾರೆ. ಇದ್ಯಾವುದಕ್ಕೂ ತಲೆ ಕಡೆಸಿ ಕೊಳ್ಳುವುದಿಲ್ಲ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ತಮ್ಮ ವಿರುದ್ದ ಗೋಬ್ಯಾಕ್ ಶೋಭಾ ಅಭಿಯಾನಕ್ಕೆ ತಿರುಗೇಟು ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ. ಆದರೆ, ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸ ಮಾಡಬಾರದು. ನಾವು ನಮ್ಮ ವಿರುದ್ದ ನಿಲ್ಲುವ ಅಭ್ಯರ್ಥಿಯನ್ನು ಅಲ್ಲಗಳೆಯುವುದಿಲ್ಲ. ಅಭಿವೃದ್ಧಿ ಆಧಾರದ ಮೇಲೆ ಮತದಾರರ ಬಳಿ ತೆರಳುತ್ತೇವೆ ಎಂದರು.
ಚಿಕ್ಕಮಗಳೂರು- ಉಡುಪಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆಂಬ ಮಾಹಿತಿ ನನಗೂ ಇದೆ. ನಾನು ಇದುವರೆಯೂ ಯಾವ ಗುತ್ತಿಗೆದಾರನಿಂದ ಒಂದು ರೂ. ಪಡೆದಿಲ್ಲ ಅವರ ಮುಖವನ್ನು ಕೂಡ ನೋಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ಕೇಂದ್ರದ ಮಂತ್ರಿಗಳೊಂದಿಗೆ ಜಗಳವಾಡಿ ಇಲ್ಲಿಗೆ ಅನುದಾನ ತಂದಿದ್ದೇನೆ. ಅಭಿಯಾನ, ಪತ್ರ ಚಳುವಳಿ ಯಾವುದು ಎಫೇಕ್ಟ್ ಆಗಲ್ಲ. ನಾನು ಮಂತ್ರಿಯಾಗಿ ಒಳ್ಳೇ ಕೆಲಸ ಮಾಡಿದ್ದೇನೆ. ಇದೇ ರೀತಿ ಹಿಂದಿನ ಚುನಾವಣೆಯಲ್ಲೂ ಮಾಡಿದ್ದರು ಎಂದು ಹೇಳಿದರು. ಅನುಧಾನ ತಂದಿರುವ ಬಗ್ಗೆ ಪ್ರಶ್ನಿಸುವಾಗ ಬಹಳ ಬುದ್ದಿವಂತಿಕೆಯಿಂದ ಕೇಳಿದ್ದಾರೆ. 2019, 20,21ರ ಅನುದಾನ ಕೇಳಿದ್ದಾರೆ. ಆದರೆ ಆ ವರ್ಷದಲ್ಲಿ ಕೇಂದ್ರದಿಂದ ಎಂ.ಪಿಗಳಿಗೆ ನಿಧಿಯನ್ನು ಕೊಟ್ಟಿಲ್ಲ ಆ ವರ್ಷ ನಿಧಿಯನ್ನು ಕೊರೊನಕ್ಕೆ ಬಳಕೆ ಮಾಡಲಾಗಿತ್ತು. ಆರ್ ಟಿಐನಲ್ಲಿ ಕೇಳಲಾಗಿದೆ ಇದರ ಹಿಂದಿರುವ ಉದ್ದೇಶ ಕೆಟ್ಟದಿದೆ. ಇದನ್ನು ಯಾರು ಮಾಡಿದ್ದಾರೆ ಅವರು ಮುಂದೇ ಅನುಭವಿಸುತ್ತಾರೆ ಎಂದು ಹೇಳಿದರು.