‘ಯುವ ಚೌಪಾಲ್’ ಸಹಿತ ಸರಣಿ ಅಭಿಯಾನಗಳ ಯಶಸ್ಸಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕರೆ

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ದಾರವರ ಕರೆಯಂತೆ ಫೆ.25ರಿಂದ ಮಾ.5ರ ವರೆಗೆ ಉಡುಪಿ ಜಿಲ್ಲೆಯ ವಿಧ ಗ್ರಾಮಗಳಲ್ಲಿ ‘ನಮೋ ಯುವ ಭಾರತ’ ಅಭಿಯಾನದಡಿ ‘ಯುವ ಚೌಪಾಲ್’, 18ರಿಂದ 25 ವರ್ಷ ವಯೋಮಿತಿಯೊಳಗಿನ ಹೊಸ ಯುವ ಮತದಾರರ ‘ಯುವ ಸಂವಾದ’ ಕಾರ್ಯಕ್ರಮ ನಡೆಯಲಿದೆ.

ಈ ಅಭಿಯಾನವು ಫೆ. 25ರಂದು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡು, ಮಾ.3ರ ತನಕ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ನಡೆಯಲಿದೆ. ಈ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪರ ಯೋಜನೆಗಳು ಮತ್ತು ಸಾಧನೆಗಳ ಬಗ್ಗೆ ಹೊಸ ಯುವ ಮತದಾರರಲ್ಲಿ ಅರಿವು ಮೂಡಿಸಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

ಅವರು ಇಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯ ಬಿಜೆಪಿ ನಿರ್ದೇಶನದಂತೆ ಗ್ರಾಮ ಚಲೋ, ‘ಮೋದಿ ಮತ್ತೊಮ್ಮೆ’ ಗೋಡೆ ಬರಹ, ಲಾಭಾರ್ಥಿಗಳ ಸಂಪರ್ಕ ಮತ್ತು ಶಕ್ತಿ ವಂದನ ಅಭಿಯಾನಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಯೋಜನೆ ರೂಪಿಸಲಾಗಿದೆ.

ಪಕ್ಷದ ಯೋಜನೆಯಂತೆ ಮಾ.3ರಂದು ಉಡುಪಿ ಜಿಲ್ಲೆಯ ನಿಗದಿತ ಕಾರ್ಯಕರ್ತರು ಉಡುಪಿ ರೈಲ್ವೆ ನಿಲ್ದಾಣದಿಂದ ಅಯೋಧ್ಯೆಯ ಶ್ರೀರಾಮ ಮಂದಿರದ ದರ್ಶನಕ್ಕೆ ತೆರಳಲ್ಲಿದ್ದಾರೆ.

ಲೋಕಸಭಾ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಲು ಉಡುಪಿ ಜಿಲ್ಲಾ ಬಿಜೆಪಿ ಸಜ್ಜಾಗಿದೆ. ಈಗಾಗಲೇ ಜಿಲ್ಲಾ ಲೋಕಸಭಾ ಚುನಾವಣಾ ಕಾರ್ಯಾಲಯವು ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಇರುವ ಮಾಂಡವಿ ಟ್ರೇಡ್ ಸೆಂಟರ್ ಸಂಕೀರ್ಣದ ತಳ ಅಂತಸ್ತಿನಲ್ಲಿ ಉದ್ಘಾಟನೆಗೊಂಡಿದೆ. ಮುಂದಿನ ಕಾರ್ಯ ಯೋಜನೆಗಳು ಪ್ರಗತಿಯಲ್ಲಿವೆ.

ಉಡುಪಿ ಜಿಲ್ಲಾ ಬಿಜೆಪಿಯ ನೂತನ ತಂಡ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪ್ರಯತ್ನದ ಮೂಲಕ ಪಕ್ಷ ನೀಡಿರುವ ಎಲ್ಲಾ ಅಭಿಯಾನಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಜೊತೆಗೆ ಸದೃಢ ಪಕ್ಷ ಸಂಘಟನೆಯ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ದೊಡ್ಡ ಅಂತರದ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿಗಳಾದ ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ್ ಶೆಟ್ಟಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಜಿಲ್ಲಾ ವಕ್ತಾರ ವಿಜಯಕುಮಾರ್ ಉದ್ಯಾವರ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!