ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜ್ : ಫೆ.24 ರಂದು ರಾಷ್ಟ್ರೀಯ ಸಮ್ಮೇಳನ
ಉಡುಪಿ: ಉದ್ಯಾವರ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಶರೀರ ಕ್ರಿಯಾ ವಿಭಾಗದ ವತಿಯಿಂದ ಫೆ.24ರಂದು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ‘ಅಗ್ನಿ ಮಂಥನ-2024’ ನಡೆಯಲಿದೆ ಎಂದು ಶರೀರ ಕ್ರಿಯಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ರವಿ ಭಟ್ ತಿಳಿಸಿದ್ದಾರೆ.
ಉಡುಪಿಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.24ರ ಬೆಳಗ್ಗೆ 9:30ಕ್ಕೆ ಸಮ್ಮೇಳನ ಕಾಲೇಜಿನ ಶ್ರೀಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಭವನ ‘ಭಾವಪ್ರಕಾಶ’ದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ಸಮ್ಮೇಳನವನ್ನು ಬೆಂಗಳೂರಿನ ಕರ್ನಾಟಕ ಸರಕಾರದ ಆಯುಷ್ ಆಯುಕ್ತರಾದ ಡಾ.ಶ್ರೀನಿವಾಸಲು ಕೆ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಯುಷ್ ವಿಭಾಗದ ನಾಮ್ ಯೋಜನಾ ಮುಖ್ಯಸ್ಥ ಡಾ. ಅನಂತ ದೇಸಾಯಿ ಹಾಗೂ ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಉಪಸ್ಥಿತರಿರುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ವಹಿಸಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಆಯುರ್ವೇದ ಗುರು ಗೋವಾದ ಉಪೇಂದ್ರ ದೀಕ್ಷಿತ್, ಕಣ್ಣೂರು ಸರಕಾರಿ ಆಯುರ್ವೇದ ಕಾಲೇಜಿನ ಶರೀರ ಕ್ರಿಯಾ ವಿಭಾಗದ ಪ್ರಾಧ್ಯಾಪಕಿ ಡಾ.ಅನಂತಲಕ್ಷ್ಮೀ ಹಾಗೂ ಕುತ್ಪಾಡಿ ಉಡುಪಿ ಎಸ್ಡಿಎಂ ಕಾಲೇಜಿನ ರೋಗನಿಧಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಪ್ರಸನ್ನ ಎನ್.ಮೊಗಸಾಲೆ ಭಾಗವಹಿಸಲಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಆಗಮಿಸುವ 500ಕ್ಕೂ ಅಧಿಕ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದು, 250ಕ್ಕೂ ಅಧಿಕ ಪ್ರಬಂಧಗಳ ಮಂಡನೆಯಾಗಲಿದೆ ಎಂದು ಡಾ.ರವಿ ಭಟ್ ತಿಳಿಸಿದರು. ದೈಹಿಕ ಜಾಠರಾಗ್ನಿಯಿಂದ ಸೇವಿಸಿದ ಆಹಾರದ ಪಚನಕ್ರಿಯೆ ಹಾಗೂ ತನ್ಮೂಲಕ ಶರೀರ ಪೋಷಣೆಯ ಕುರಿತು ಸಮ್ಮೇಳನದಲ್ಲಿ ಚಿಂತನ-ಮಂಥನ ನಡೆಯಲಿದೆ.
ಸಮ್ಮೇಳನದ ಸಮಾರೋಪ ಸಮಾರಂಭ ಸಂಜೆ 4:30 ಕ್ಕೆ ಎಸ್ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಶರೀರ ಕ್ರಿಯಾ ವಿಭಾಗದ ಮುಖ್ಯಸ್ಥ ಡಾ.ಸುಧೀಂದ್ರ ಆರ್.ಮೊಹರೆ, ಕಾಲೇಜಿನ ಡೀನ್ (ಪಿಜಿ) ಡಾ.ಅಶೋಕ್ ಕುಮಾರ್, ಡೀನ್ (ಆಡಳಿತ) ಡಾ.ವೀರಕುಮಾರ್, ಶರೀರ ಕ್ರಿಯಾ ವಿಭಾಗದ ಸಹ ಸಹ ಪ್ರಾಧ್ಯಾಪಕಿ ಡಾ.ಅಪರ್ಣ ಕೆ., ಪಿಆರ್ಓ ವಿಭಾಗದ ಡಾ.ಶ್ರೀನಿಧಿ ಬಲ್ಲಾಳ್ ಉಪಸ್ಥಿತರಿದ್ದರು.