ಜವಾಬ್ದಾರಿಯನ್ನು ಅರಿತು ಒಂದು ತಂಡವಾಗಿ ಕೆಲಸ ಮಾಡೋಣ: ಕಿಶೋರ್ ಕುಮಾರ್

ಬಿಜೆಪಿ ಜಿಲ್ಲಾ ನೂತನ ಪದಾಧಿಕಾರಿಗಳ ಸಭೆ

ಉಡುಪಿ: ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ನೂತನ ತಂಡ ರಚನೆ ಆಗಿದೆ. ಜಿಲ್ಲಾ ಸಮಿತಿ ಮತ್ತು ಮಂಡಲ, ಮೋರ್ಚಾ, ಪ್ರಕೋಷ್ಠಗಳ ಸಹಿತ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಒಂದು ಉತ್ತಮ ತಂಡವಾಗಿ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ನೂತನ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದರು.

ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಕಾರ್ಯಕರ್ತರ ಸಮರ್ಪಣಾಭಾವದ ಸೇವೆ ಮತ್ತು ಪಕ್ಷದ ಸಂಘಟನಾ ಸಾಮರ್ಥ್ಯದಿಂದ ಬಿಜೆಪಿ ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಪಕ್ಷದ ಚಟುವಟಿಕೆಗಳಿಗೆ ಆದ್ಯತೆ ಮೇರೆಗೆ ಸಮಯವನ್ನು ನೀಡಿ, ಪಕ್ಷ ಸಂಘಟನೆಯ ಜೊತೆಗೆ ಪಕ್ಷದ ಎಲ್ಲ ಅಭಿಯಾನಗಳನ್ನು ಸಮಯದ ಇತಿಮಿತಿಯೊಳಗೆ ಸಮರ್ಪಕವಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಬಿಜೆಪಿ ಉಡುಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಒಳ್ಳೆಯ ತಂಡ ರಚನೆಯಾಗಿದೆ. ಚುನಾವಣಾ ಪರ್ವದ ಸನ್ನಿವೇಶದಲ್ಲಿ ಪದಾಧಿಕಾರಿಗಳು ಪಕ್ಷದ ಕಛೇರಿಗೆ ಭೇಟಿ ನೀಡಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪರಿಪಾಠ ಅಗತ್ಯ. ರಾಜ್ಯ ಬಿಜೆಪಿ ನೀಡುವ ಕಾರ್ಯಕ್ರಮಗಳನ್ನು ಬದ್ಧತೆಯಿಂದ ಪೂರೈಸುವ ಜೊತೆಗೆ ಪಕ್ಷದ ನಿಗದಿತ ಸಭೆಗಳಿಗೆ ತಪ್ಪದೇ ಹಾಜರಾಗಿ ಸದೃಢ ಪಕ್ಷ ಸಂಘಟನೆಯ ಮೂಲಕ ಜಿಲ್ಲೆಯ ವಿಜಯ ಯಾತ್ರೆಯನ್ನು ಮುಂದುವರಿಸಲು ಅಧ್ಯಕ್ಷರೊಂದಿಗೆ ಕೈಜೋಡಿಸಿ ಬದ್ಧತೆಯಿಂದ ಶ್ರಮಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯಕುಮಾರ್ ಶೆಟ್ಟಿ ರಾಜ್ಯ ಬಿಜೆಪಿ ನೀಡಿರುವ ನಾಲ್ಕು ಅಭಿಯಾನಗಳಾದ ಗ್ರಾಮ ಚಲೋ, ಶಕ್ತಿ ವಂದನಾ, ‘ಮೋದಿ ಮತ್ತೊಮ್ಮೆ’ ಗೋಡೆ ಬರಹ ಮತ್ತು ಲಾಭಾರ್ತಿಗಳ ಸಮಾವೇಶದ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ನೂತನ ಪದಾಧಿಕಾರಿಗಳು ಮತ್ತು ಮಂಡಲಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿ, ದಿನಕರ ಶೆಟ್ಟಿ ಹೆರ್ಗ ವಂದಿಸಿದರು. ರೇಷ್ಮಾ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!