ಕರ್ನಾಟಕದಲ್ಲಿ ಶೀಘ್ರವೇ ‘ಬೊಂಬಾಯಿ ಮಿಠಾಯಿ’ ನಿಷೇಧ?

ಬೆಂಗಳೂರು: ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಇಷ್ಟಪಡುವ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ ಪತ್ತೆಯಾದ ನಂತರ, ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳು ಕಾಟನ್ ಕ್ಯಾಂಡಿ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲು ಮುಂದಾಗಿವೆ.

ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಅದರ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಕಾರ್ಸಿನೋಜೆನ್ ಆಗಿರುವ ರೋಡಮೈನ್-ಬಿ ಇರುವಿಕೆಯು ಕಾಟನ್ ಕ್ಯಾಂಡಿಯನ್ನು ತಿನ್ನುವವರಿಗೆ ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎಂದು ವರದಿಗಳು ಸೂಚಿಸಿವೆ.

ವಿಶೇಷವಾಗಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ರಸ್ತೆಗಳಲ್ಲಿ, ಉದ್ಯಾನವನಗಳು ಮತ್ತು ಉದ್ಯಾನಗಳ ಹೊರಗೆ ಮಾರಾಟ ಮಾಡಲಾಗುತ್ತದೆ. ಮಕ್ಕಳಲ್ಲಿ ಜನಪ್ರಿಯವಾಗಿ ಬಾಂಬೆ ಮಿಠಾಯಿ ಎಂದು ಕರೆಸಿಕೊಳ್ಳುವ ಕಾಟನ್ ಕ್ಯಾಂಡಿ “ಅತ್ಯಂತ ಹಾನಿಕಾರಕ” ಎಂದು ಗುರುತಿಸಲಾಗಿದೆ. ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ರೋಡಮೈನ್-ಬಿ ಇರುವಿಕೆಯನ್ನು ದೃಢಪಟ್ಟಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕ್ಯಾಟನ್ ಕ್ಯಾಂಡಿ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ.

ರಾಜ್ಯದಾದ್ಯಂತ ವ್ಯಾಪಾರ ಮೇಳಗಳು, ಮದುವೆಗಳು ಮತ್ತು ಉದ್ಯಾನವನಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಕಾಟನ್ ಕ್ಯಾಂಡಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪರೀಕ್ಷೆಯ ಫಲಿತಾಂಶಗಳ ನಂತರ ಅದರ ನಿಷೇಧದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಂಟಿ ಆಯುಕ್ತ ಡಾ.ಹರೀಶ್ವರ ಮಾಹಿತಿ ನೀಡಿದ್ದಾರೆ.

ಈಗಾಗಲೇ ಕಾಟನ್ ಕ್ಯಾಂಡಿ ಮಾದರಿಗಳ ಸಂಗ್ರಹವನ್ನು ಪ್ರಾರಂಭಿಸಿದ್ದಾರೆ. ನಾವು ಟೆಸ್ಟ್ ರಿಸಲ್ಟ್ ನೋಡುತ್ತೇವೆ. ಇದಲ್ಲದೆ, ಆರೋಗ್ಯ ಕಮಿಷನರೇಟ್‌ನಿಂದಲೂ ನಾವು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮೌಲ್ಯಮಾಪನ ಮಾಡುತ್ತೇವೆ ಎಂದು ಆಹಾರ ಸುರಕ್ಷತಾ ಆಯುಕ್ತರು ಡಿ. ರಂದೀಪ್ ತಿಳಿಸಿದ್ದಾರೆ.

ರೋಡಮೈನ್-ಬಿ, ಜವಳಿ ಬಣ್ಣವು ಕ್ಯಾನ್ಸರ್ ಕಾರಕ ಎಂದು ತಿಳಿದುಬಂದಿದೆ. ಕಾಟನ್ ಕ್ಯಾಂಡಿಗೆ ಮಾತ್ರವಲ್ಲದೆ ಜೆಲ್ಲಿಗಳು ಮತ್ತು ಮಿಠಾಯಿಗಳಿಗೆ ಕಲರ್‌ಫುಲ್ ಬಣ್ಣಗಳನ್ನು ನೀಡಲು ಇದನ್ನು ಸೇರಿಸಲಾಗುತ್ತದೆ. ಕೆಲವೊಮ್ಮೆ ಮೆಣಸಿನ ಪುಡಿ ಕೆಂಪಗೆ ಕಾಣಲಿ ಎಂದೂ ಕೂಡ ಕೆಂಪು ಬಣ್ಣವನ್ನು ಸೇರಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ” ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿಯ ಹಿರಿಯ ಸಲಹೆಗಾರ ಡಾ ವಿವೇಕ್ ಬೆಳತ್ತೂರ್ ಹೇಳಿದ್ದಾರೆ.

ರೋಡಮೈನ್-ಬಿ ಅಂಶ ಆಹಾರಕ್ಕೆ ಸೇರಿಸಿದಾಗ ಎದ್ದುಕಾಣುವ ಮತ್ತು ಆಕರ್ಷಕ ಬಣ್ಣವನ್ನು ಹೆಚ್ಚಿಸುತ್ತದೆ. ಇದು ಮಕ್ಕಳು ಮತ್ತು ವಯಸ್ಕರನ್ನು ಸಹ ಆಕರ್ಷಿಸುತ್ತದೆ. ಆದರೆ, ಇದರ ಬಳಕೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ಕಾರಣವಾಗುತ್ತದೆ. ಇದಲ್ಲದೆ, ಜೆಲ್ಲಿಗಳು ಮತ್ತು ಮಿಠಾಯಿಗಳಂತಹ ಉತ್ಪನ್ನಗಳ ಮೇಲೆ ಎಚ್ಚರಿಕೆಯ ಲೇಬಲ್‌ಗಳು ಕೂಡ ಇಲ್ಲದೆ ಇರುವುದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.

ಅದನ್ನು ಸೇವಿಸುವುದರಿಂದ ಉಂಟಾಗುವ ಅನಾರೋಗ್ಯದ ಅಪಾಯಗಳನ್ನು ಜನರು ನಿರ್ಲಕ್ಷಿಸಲು ಕಾರಣವಾಗು ತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೆಡಿ-ಟು-ಈಟ್ ಊಟಗಳು, ವಿಶೇಷವಾಗಿ ಗ್ರೇವಿ ಮತ್ತು ನೂಡಲ್ಸ್‌ ಗಳಂತಹ ಮಾಂಸಾಹಾರಿ ಪದಾರ್ಥಗಳಲ್ಲಿಯೂ ಈ ಅಂಶ ಇರುತ್ತದೆ. ಉತ್ಪನ್ನಗಳ ಜೀವಿತಾವಧಿಯನ್ನು ಕಾಪಾಡಲು ಮತ್ತು ಬಣ್ಣವನ್ನು ಹೆಚ್ಚಿಸಲು ನೈಟ್ರೇಟ್‌ಗಳು, ನೈಟ್ರೈಟ್‌ಗಳು ಮತ್ತು ರೋಡಮೈನ್-ಬಿ ನಂತಹ ಅಂಶಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಪ್ಯಾಕೇಜಿಂಗ್ ಲೇಬಲ್‌ಗಳಲ್ಲಿ ಈ ಅಂಶಗಳನ್ನು ಪಟ್ಟಿ ಮಾಡದಿದ್ದರೂ, ಈ ವಸ್ತುಗಳು ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತವೆ. ಸ್ಲೋ ಪಾಯ್ಸನ್ ಆಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಅಂತಹ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸುವುದು ಸೂಕ್ತ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!