ಬಿಜೆಪಿ ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು ಫೆ 20: ಬಿಜೆಪಿ ಸರ್ಕಾರದ್ದು 2019 ರಿಂದ 2023ರ ವರೆಗೆ ದ್ವೇಷ ತುಂಬಿದ, ತುಕ್ಕು ಹಿಡಿದ ಬಸ್ಸು ಮುಂದಕ್ಕೆ ಹೋಗಲೇ ಇಲ್ಲ. ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಗಾಳಿ ಇಲ್ಲದೆ ಕೆಟ್ಟು ನಿಂತಿರುವ ಬಸ್ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ನೀಡಿದ್ದ ಹೇಳಿಕೆಗೆ ಇಂದು ವಿಧಾನಸಭೆಯಲ್ಲಿ ಉತ್ತರ ನೀಡಿ ತಿರುಗೇಟು ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕ್ಕಿಂತಲೂ ಹೆಚ್ಚಿನ ಹಾಲು ಉತ್ಪಾದನೆಯಾಗಿದೆ. 2023- 24 ರಲ್ಲಿ 84.41 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗಿದೆ ಎಂದು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.

ರೈತರಿಗೆ ನೀಡಬೇಕಿದ್ದ ಪ್ರೋತ್ಸಾಹ ಧನಕ್ಕಾಗಿ 2019 ರಿಂದ ಇಲ್ಲಿಯವರೆಗೆ 1178 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಈ ವರ್ಷ 1172 ಕೋಟಿ ರೂ.ಗಳಲ್ಲಿ 971 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ರೈತರಿಗೆ 3.00 ರೂ.ಗಳಿಂದ 5. ರೂ.ಗಳಿಗೆ ಪ್ರೋತ್ಸಾಹ ಧನ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂದರು.

ಸರ್ಕಾರದ ನೀತಿ, ಮುನ್ನೋಟವನ್ನು ಜನತೆಯ ಮುಂದಿಟ್ಟಿದ್ದಾರೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ನಿಲುವು, ನೀತಿ, ಮುನ್ನೋಟ ಹಾಗೂ ಕಾರ್ಯಕ್ರಮ ಗಳನ್ನು ಸ್ಪಷ್ಟವಾಗಿ ರಾಜ್ಯದ ಜನತೆ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಮುಖ್ಯಮಂತ್ರಿಗಳು ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!