ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ನಿಧನ
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ (95)ಅವರು ಇಂದು ಬೆಳಗ್ಗೆ ದೆಹಲಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
1950ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ವಕೀಲಿಕೆ ಆರಂಭಿಸಿದ್ದ ಅವರು, 70 ವರ್ಷಕ್ಕೂ ಹೆಚ್ಚಿನ ಕಾಲ ವಕೀಲ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ದೇಶದ ಪ್ರಮುಖ ವಕೀಲರಲ್ಲಿ ಓರ್ವರಾಗಿದ್ದ ನಾರಿಮನ್ ಅವರು, 1972ರಲ್ಲಿ ದೇಶದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
1991–2010ರ ವರೆಗೆ ಭಾರತದ ಬಾರ್ ಒಕ್ಕೂಟದ ಅಧ್ಯಕ್ಷರಾಗಿದ್ದ ನಾರಿಮನ್, 1989–2005ರವರೆಗೆ ಪ್ಯಾರಿಸ್ ನಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮಂಡಳಿಯ ನ್ಯಾಯಾಲಯದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಜಲವಿವಾದಗಳಲ್ಲಿ ಕರ್ನಾಟಕದ ಪರವಾಗಿ ಸಮರ್ಥ ವಾದ ಮಂಡಿಸಿ ಹಲವು ವ್ಯಾಜ್ಯಗಳಲ್ಲಿ ಜಯ ತಂದು ಕೊಟ್ಟಿದ್ದ ನಾರಿಮನ್ ಅವರಿಗೆ 1991ರಲ್ಲಿ ಪದ್ಮಭೂಷಣ ಹಾಗೂ 2007ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿವೆ.
ನಾರಿಮನ್ ಅವರ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಹಿರಿಯ ವಕೀಲ ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಇದೊಂದು “ಯುಗಾಂತ್ಯ ” ಎಂದು ಹೇಳಿದ್ದಾರೆ.