ಮಾರ್ಚ್ 22 ರಿಂದ IPL -2024 ಆರಂಭ

ಹೊಸದಿಲ್ಲಿ: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(IPL)-2024 ಮಾರ್ಚ್ 22ರಿಂದ ಆರಂಭವಾಗಲಿದೆ ಎಂದು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಇಂದು ದೃಢಪಡಿಸಿದ್ದಾರೆ.

ಮುಂಬರುವ ಸಾರ್ವತ್ರಿಕ ಚುನಾವಣೆಯ ಹೊರತಾಗಿಯೂ ಐಪಿಎಲ್ T20 ಟೂರ್ನಮೆಂಟ್ ದೇಶಾದ್ಯಂತ ವಿವಿಧ ಸ್ಟೇಡಿಯಮ್‌ಗಳಲ್ಲಿ ನಡೆಯಲಿದೆ.

ಈ ವರ್ಷ ಲೋಕಸಭೆ ಚುನಾವಣೆ ಎಪ್ರಿಲ್ ಹಾಗೂ ಮೇನಲ್ಲಿ ನಡೆಯುವ ನಿರೀಕ್ಷೆ ಇರುವುದರಿಂದ 17ನೇ ಆವೃತ್ತಿಯ ಐಪಿಎಲ್‌ನ ವೇಳಾಪಟ್ಟಿಯನ್ನು ಈ ತನಕ ಪ್ರಕಟಿಸಲಾಗಿಲ್ಲ.

ಮೊದಲ 15 ದಿನಗಳ ವೇಳಾಪಟ್ಟಿಯನ್ನು ಬೇಗನೆ ಬಿಡುಗಡೆ ಮಾಡಲಾಗುವುದು, ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಉಳಿದ ಪಂದ್ಯಗಳ ವೇಳಾಪಟ್ಟಿಯ ಕುರಿತು ನಿರ್ಧರಿಸಲಾಗುವುದು ಎಂದು ಧುಮಾಲ್ ಹೇಳಿದ್ದಾರೆ.

ಇದೀಗ ನಾವು ಮಾರ್ಚ್ 22ರಂದು ಚೆನ್ನೈನಲ್ಲಿ ಟೂರ್ನಮೆಂಟ್ ಆರಂಭಿಸುವ ಕುರಿತು ಯೋಜಿಸುತ್ತಿದ್ದೇವೆ. ಸರಕಾರಿ ಏಜೆನ್ಸಿಗಳೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. 15 ದಿನಗಳ ವೇಳಾಪಟ್ಟಿಯನ್ನು ಮೊದಲಿಗೆ ಬಿಡುಗಡೆ ಮಾಡಲಿದ್ದೇವೆ. ಇಡೀ ಟೂರ್ನಮೆಂಟ್ ಭಾರತದಲ್ಲೇ ನಡೆಯಲಿದೆ. ಲೋಕಸಭೆ ಚುನಾವಣೆಯ ವೇಳಾಪಟ್ಟಿ ಮುಂದಿನ ತಿಂಗಳ ಆರಂಭದಲ್ಲಿ ಪ್ರಕಟವಾಗಬಹುದು. ಚುನಾವಣೆಯ ದಿನಾಂಕ ಪ್ರಕಟವಾದ ನಂತರ ಟೂರ್ನಿಯ 2ನೇ ಹಂತದ ವೇಳಾಪಟ್ಟಿಯನ್ನು ಸಿದ್ದಪಡಿಸುತ್ತೇವೆ ಎಂದು ಧುಮಾಲ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಕಾರಣ ಟೂರ್ನಮೆಂಟ್ ವಿದೇಶಿ ನೆಲದಲ್ಲಿ ನಡೆಯಬಹುದು ಎಂಬ ಕುರಿತು ದಟ್ಟ ವದಂತಿ ಇದೆ. ಭಾರತದಲ್ಲಿಯೇ ಇಡೀ ಟೂರ್ನಮೆಂಟ್ ನಡೆಸುವ ಕುರಿತು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹಂತ ಹಂತವಾಗಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಕ್ರಿಕೆಟ್ ಮಂಡಳಿಯು ನಮಗೆ ಮಾಹಿತಿ ನೀಡಿದೆ ಎಂದು ಕೆಲವು ಫ್ರಾಂಚೈಸಿಗಳ ಮೂಲಗಳು ತಿಳಿಸಿವೆ.

2009ರಲ್ಲಿ ಮಾತ್ರ ಇಡೀ ಐಪಿಎಲ್ ಟೂರ್ನಿಯು ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. 2014ರಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಟೂರ್ನಮೆಂಟ್‌ನ ಸ್ವಲ್ಪ ಭಾಗವು ಯುಎಇನಲ್ಲಿ ನಡೆದಿತ್ತು. ಆದರೆ, 2019ರಲ್ಲಿ ಚುನಾವಣೆ ಇದ್ದ ಹೊರತಾಗಿಯೂ ಐಪಿಎಲ್ ಟೂರ್ನಮೆಂಟ್ ಭಾರತದಲ್ಲೇ ನಡೆದಿತ್ತು.

ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವು T20 ವಿಶ್ವಕಪ್ ಆರಂಭವಾಗುವ ಮೊದಲು ಮೇ 26ರಂದು ನಡೆಯುವ ಸಾಧ್ಯತೆಯಿದೆ. ಭಾರತವು ಜೂನ್ 5 ರಂದು ನ್ಯೂಯಾರ್ಕ್ನಲ್ಲಿ ಐರ್ಲ್ಯಾಂಡ್ ವಿರುದ್ಧ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ.

ಜೂನ್ 1ರಂದು ಅಮೆರಿಕ ಹಾಗೂ ಕೆನಡ ನಡುವಿನ ಹಣಾಹಣಿಯ ಮೂಲಕ ವಿಶ್ವಕಪ್ ಟೂರ್ನಿಯು ಆರಂಭವಾಗಲಿದೆ.

ಐಪಿಎಲ್ನ ಉದ್ಘಾಟನಾ ಪಂದ್ಯವು ಸಂಪ್ರದಾಯದಂತೆ ಕಳೆದ ವರ್ಷದ ಟೂರ್ನಿಯ ಫೈನಲಿಸ್ಟ್ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ.

ಇನ್ನು ಕೆಲವೇ ಸಮಯ ಇರುವುದನ್ನು ಮನಗಂಡಿರುವ ಕೆಲವು ಫ್ರಾಂಚೈಸಿಗಳು ಈ ವಾರಾಂತ್ಯದಲ್ಲಿ ಪೂರ್ವ ತಯಾರಿ ಶಿಬಿರಗಳನ್ನು ಆರಂಭಿಸಲು ನಿರ್ಧರಿಸಿವೆ. ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಸರಣಿಯು ಮಾರ್ಚ್ 11ರಂದು ಕೊನೆಯಾಗಲಿದೆ. ಐಪಿಎಲ್ ಆರಂಭವಾಗುವ ಮೊದಲು ಕೆಲವು ಆಟಗಾರರಿಗೆ ಕೆಲವೇ ದಿನಗಳ ಕಾಲ ವಿಶ್ರಾಂತಿ ಲಭಿಸಲಿದೆ.

2024ರ ಐಪಿಎಲ್ಗಾಗಿ ಆಟಗಾರರ ಹರಾಜು ಪ್ರಕ್ರಿಯೆಯು ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದಿತ್ತು. ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಸ್ಟಾರ್ಕ್ರನ್ನು ಕೋಲ್ಕತಾ ನೈಟ್ ರೈಡರ್ಸ್ 24.75 ಕೋಟಿ.ರೂ. ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

Leave a Reply

Your email address will not be published. Required fields are marked *

error: Content is protected !!