ಕೋಮುಗಲಭೆ ಎಬ್ಬಿಸಿದ ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್: ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಅಶಾಂತಿ ಮತ್ತು ಕೋಮುಗಲಭೆ ಎಬ್ಬಿಸುತ್ತಿದ್ದ ಕಾರಣ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಸೋಮವಾರ ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ.
ಪೊಲೀಸರ ಕ್ರಮದ ಬಗ್ಗೆ ಪ್ರಸ್ತಾಪಿಸಿದ ಎಂಎಲ್ಸಿ ಗಳಾದ ಶ್ರೀನಿವಾಸ್ ಪೂಜಾರಿ ಮತ್ತು ರವಿಕುಮಾರ್ಗೆ ಅವರು ಉತ್ತರಿಸಿದರು. ಕೆರಗೋಡಿನಲ್ಲಿ ಹನುಮಾನ್ ಧ್ವಜ ಉರುಳಿಸಿರುವ ವಿಚಾರವನ್ನು ಬಿಜೆಪಿ ಮುಖಂಡರು ಮತ್ತೆ ಪ್ರಸ್ತಾಪಿಸಿದಾಗ, ಗ್ರಾಮ ಪಂಚಾಯಿತಿಯಿಂದ ರಾಷ್ಟ್ರಧ್ವಜ ಅಥವಾ ರಾಜ್ಯ ಧ್ವಜಾರೋಹಣಕ್ಕೆ ಅನುಮತಿ ಕೋರಲಾಗಿದ್ದು, ನಿಯಮ ಉಲ್ಲಂಘಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಮುಚ್ಚಿ ಹಾಕಲು ಪರೋಕ್ಷವಾಗಿ ಸರ್ಕಾರ ಕಾರಣವಾಗಿದೆ. ಕೆರಗೋಡು ಗ್ರಾಮದ ವಿವಾದ ಇಷ್ಟು ಆಗೋಕೆ ಬಿಡಬಾರದಿತ್ತು. ಜಿಲ್ಲಾಧಿಕಾರಿ ಅಷ್ಟೊತ್ತು ರಾತ್ರಿಯಲ್ಲಿ ಹೋಗಿ ಬಾವುಟ ಇಳಿಸಿದ್ದು ಯಾಕೆ? ಜನರೇ ದುಡ್ಡು ಕೊಟ್ಟು ನಿರ್ಮಾಣ ಮಾಡಿದ ಧ್ವಜ ಕಂಬ ಅದು. ಆ ಜನರಿಗೆ ಪೆಟ್ಟು ಕೊಟ್ಟು ಗಲಾಟೆ ಮಾಡಿದ್ದು ಯಾಕೆ? ಪರಮೇಶ್ವರ್ ಅವರು ಸಮರ್ಥರಿದ್ದಾರೆ.
ಇವರು ಇದ್ದಾಗಲೇ ಹೀಗೇಕಾಯ್ತು? ಬೆಳಗಾವಿಯಲ್ಲಿ ಜೈ ಶ್ರೀರಾಮ್ ಎಂಬುವರ ಮೇಲೆ ಕಲ್ಲು ತೂರಾಟ ಆಗಿದೆ. ಯಾರಿಗಾದಾರೂ ನೋವಾಗಿದೆ ಎಂದರೆ ಹೇಳಲಿ? ಶಾಸಕ ಅಂದರೆ ಆ ಪಕ್ಷ, ಈ ಪಕ್ಷ ಅಂತ ಇರಲ್ಲ. ಭರತ್ ಶೆಟ್ಟಿ ಮೇಲೆ ಯಾಕೆ ಕೇಸ್ ಹಾಕಿರುವುದು? ಅಲ್ಲಿನ ಶಾಲೆಯೊಂದರ ಶಿಕ್ಷಕಿಯು ಶ್ರೀರಾಮನ ಬಗ್ಗೆ ಇಲ್ಲಸಲ್ಲದ್ದು ದೂರಿದ್ದಾರೆ. ಅವರ ಮೇಲೆ ಯಾವುದೇ ಕೇಸ್ ಆಗಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಕುಸಿದಿದೆ. ಕೊಲೆ, ಕೋಮುಗಲಭೆ, ಸೈಬರ್ ಕ್ರೈಂ ಅಧಿಕವಾಗಿದೆ. ಹಾವೇರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಆತ್ಯಾಚಾರ, ಬೆಳಗಾವಿಯಲ್ಲಿ ದಲಿತ ಮಹಿಳೆಗೆ ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿ ಹಲ್ಲೆ ಸೇರಿದಂತೆ ಹಲವು ರೀತಿಯಲ್ಲಿ ಅಪರಾಧಗಳು ನಡೆದಿವೆ. ಸರ್ಕಾರ ಅಪರಾಧಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಫಲವಾಗಿದೆ ಎಂದು ಆರೋಪಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಎನ್.ರವಿಕುಮಾರ್, ತಳವಾರ್ ಸಾಬಣ್ಣ ಸೇರಿದಂತೆ ಇನ್ನಿತರ ಸದಸ್ಯರು ಸರ್ಕಾರದ ಗಮನ ಸೆಳೆದರು.
ಇದಕ್ಕೆ ಸಚಿವ ಪರಮೇಶ್ವರ್ ಉತ್ತರಿಸಿ 2020ರಲ್ಲಿ ಒಟ್ಟು ಐಪಿಸಿ ಕೇಸ್ 1,60,206 ಕೇಸ್ ಆಗಿವೆ. ನಮ್ಮ ಕಾಲದಲ್ಲಿ ಇಂತಹ ಕೇಸ್ಗಳ ಸಂಖ್ಯೆ ಕಡಿಮೆ ಆಗಿದೆ. ನಮ್ಮ ಸರ್ಕಾರ ಬಂದ ಮೇಲೆ ಸೈಬರ್ ಕ್ರೈಂ, ಅಪರಾಧ ಸಂಖ್ಯೆ ಹೆಚ್ಚಾಗಿದೆ ಎಂಬುದು ಸುಳ್ಳು. ಕರ್ನಾಟಕ ಪೊಲೀಸ್ ದೇಶದಲ್ಲೇ ಉನ್ನತ ಸ್ಥಾನದಲ್ಲಿದೆ. 7 ತಿಂಗಳಲ್ಲಿ ಆದ ಕೊಲೆ ಪ್ರಕರಣಗಳ ಪೈಕಿ ಶೇ.95 ಆರೋಪಿಗಳನ್ನು ಹಿಡಿದಿದ್ದೇವೆ. ಸೈಬರ್ ಕ್ರೈಂ ನಮ್ಮ ಅವಧಿಯಲ್ಲಿ ಹೆಚ್ಚಾಗಿದೆ. ಅದನ್ನು ಒಪ್ಪಿಕೊಳ್ಳುತ್ತೇವೆ. ಈಗ ನಾವು ಎಲ್ಲಾ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಠಾಣೆ ನಿರ್ಮಿಸಿದ್ದೇವೆ. ನಮ್ಮ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.