ತುಮಕೂರು:ಆಸ್ತಿಗಾಗಿ ಹೆತ್ತ ತಾಯಿಯನ್ನು ದಿಗ್ಭಂದನ ಮಾಡಿದ ಮಕ್ಕಳು

ತುಮಕೂರು : ಆಸ್ತಿಗಾಗಿ ತಮ್ಮ ಹೆತ್ತ ತಾಯಿಯನ್ನು ದಿಗ್ಭಂದನ ಮಾಡಿರುವ ಘಟನೆ ತುಮಕೂರಿನ ಶಿರಾ ಗೇಟ್ ಸಾಡೆಪುರದಲ್ಲಿ ನಡೆದಿದೆ. ಕಳೆದ 11 ತಿಂಗಳಿನಿಂದ ಮಗ-ಸೊಸೆ ಇಬ್ಬರೂ ಸೇರಿ ಆಸ್ತಿಗಾಗಿ ತಾಯಿಯನ್ನು ಬಂಧನದಲ್ಲಿಟ್ಟಿರುವ ಘಟನೆ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 80 ವರ್ಷದ ವಯೋ ವೃದ್ದೆ ಪಂಚಾಕ್ಷರಮ್ಮ ದಿಗ್ಭಂದನಕೊಳಗಾದವರು ಇವರು ನಿವೃತ್ತ ಸಿಡಿಪಿಓ ಆಗಿದ್ದು ಸುಮಾರು 12 ಮನೆಗಳು ಸೇರಿದಂತೆ ಅನೇಕ ಆಸ್ತಿಗೆ ಹಕ್ಕುದಾರಾಗಿದ್ದಾರೆ. ಈಗಾಗಲೇ ವೃದ್ದೆಯ ಬಳಿ ಇದ್ದ ಒಡವೆಗಳನ್ನು ಮಕ್ಕಳು ಕಸಿದುಕೊಂಡಿದ್ದು.

ಸದ್ಯ ಇರುವ ಮನೆಗಳನ್ನು ಮಕ್ಕಳ ಹೆಸರಿಗೆ ಮಾಡಿಸಿಕೊಳ್ಳಲು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಗ ಜೇಮ್ ಸುರೇಶ್ ಹಾಗೂ ಸೊಸೆ ಆಶಾ ಇಬ್ಬರೂ ಸೇರಿ ಪಂಚಾಕ್ಷರಮ್ಮನನ್ನು ಮನೆಯಲ್ಲೆ ಬೀಗ ಜಡಿದು ದಿಗ್ಬಂದನ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಮೂಲಕ ಸಾಂತ್ವಾನ ಕೇಂದ್ರ, ಸಖಿ ಕೇಂದ್ರ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ರವಾನೆಯಾಗಿದೆ. ಬಳಿಕ ಅವರ ಮನೆಗೆ ತುಮಕೂರು ‌ನಗರ ಪೊಲೀಸರು ಹಾಗೂ ಸಾಂತ್ವಾನ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ವೃದ್ದೆಯನ್ನು ರಕ್ಷಿಸಿ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ರಕ್ಷಣೆ ಮಾಡಿದ್ದಾರೆ. ಸಖಿ ಕೇಂದ್ರದಲ್ಲಿಆಕೆಗೆ ಎರಡು ದಿನ ಚಿಕಿತ್ಸೆ ನೀಡಲಾಗಿದೆ. ಬಳಿಕ ಅಧಿಕಾರಿಗಳು ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಕ್ಕಳು ಮಾತ್ರ ಆ ಕಡೆ ತಲೆ ಹಾಕಿ ನೋಡಿಲ್ಲ. ಹೀಗಾಗಿ ಮಕ್ಕಳು ಬಾರದ ಹಿನ್ನೆಲೆ, ಅಧಿಕಾರಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸರಿಗೆ ದೂರು ನೀಡಿದ್ದಾರೆ.

ಬಳಿಕ ನ್ಯಾಯಾಧೀಶರು ಹಾಗೂ ಸಾಂತ್ವಾನ ಕೇಂದ್ರದ ಸಿಬ್ಬಂದಿ ವೃದ್ದೆಯನ್ನ ಮನೆಗೆ ಕರೆದುಕೊಂಡು ಹೋಗಿ ವಾಪಸ್ ಬಿಟ್ಟಿದ್ದಾರೆ. ಮಕ್ಕಳಿಗೆ ವಾರ್ನ್ ಮಾಡಿ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವಂತೆ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ. ನ್ಯಾಯಾಧೀಶರ ಮುಂದೆ ಸರಿಯಾಗಿ ನೋಡಿಕೊಳ್ಳುತ್ತೇವೆ ಎಂದು ಮಕ್ಕಳು ಹೇಳಿದ್ದಾರೆ.

ಪಂಚಾಕ್ಷರಮ್ಮನಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದಾರೆ. ಈಕೆಗೆ 50 ಸಾವಿರ ಪೆನ್ಶನ್​ ಕೂಡ ಬರುತ್ತಿದ್ದು, ಈ ಹಣವನ್ನೂ ಕೂಡ ಮಕ್ಕಳೇ ಬಳಸಿಕೊಳ್ಳುತ್ತಿದ್ದರು. ಇಷ್ಟಾದರೂ ನೋಡಿಕೊಳ್ಳದೇ ಆಸ್ತಿಗಾಗಿ ಹೆತ್ತ ತಾಯಿಯನ್ನು ಬಂಧನದಲ್ಲಿಟ್ಟಿದ್ದರು. ನ್ಯಾಯಾಧೀಶರ ಮಧ್ಯಪ್ರವೇಶದಿಂದ ಪ್ರಕರಣ ಇತ್ಯರ್ಥವಾಗಿದೆ.

Leave a Reply

Your email address will not be published. Required fields are marked *

error: Content is protected !!