ಸಂವಿಧಾನ ಜಾಗೃತಿಗಾಗಿ ಕ್ರಿಕೆಟ್ ಪಂದ್ಯಾಟ: ಪೌರಕಾರ್ಮಿಕರ ತಂಡ ವಿನ್ನರ್ಸ್ -ಪತ್ರಕರ್ತರ ತಂಡ ರನ್ನರ್ಸ್

ಉಡುಪಿ: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ನಗರಸಭೆ, ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥದ ಪ್ರಯುಕ್ತ ನಗರದ ಬೀಡಿನಗುಡ್ಡೆ ಮೈದಾನದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಕ್ರಿಕೆಟ್ ಪಂದ್ಯಾಟದಲ್ಲಿ ಪೌರಕಾರ್ಮಿಕರ ತಂಡ ವಿನ್ನರ್ ಹಾಗೂ ಪತ್ರಕರ್ತರ ತಂಡ ರನ್ನರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಈ ಕ್ರಿಕೆಟ್ ಪಂದ್ಯಾಟದಲ್ಲಿ ಡಿಸಿ ಇಲೆವೆನ್, ಎಸ್‌ಪಿ ಇಲೆವೆನ್, ವಕೀಲರು, ಅರಣ್ಯ ಇಲಾಖೆ, ಸಿಇಓ ಇಲೆವೆನ್, ಅಬಕಾರಿ, ಪತ್ರಕರ್ತರು, ಪೌರ ಕಾರ್ಮಿಕರು ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಉಡುಪಿ ಪತ್ರಕರ್ತರ ತಂಡವು ಮೊದಲ ಸುತ್ತಿನಲ್ಲಿ ಎಸ್ಪಿ ಇಲೆವೆನ್ ತಂಡವನ್ನು ಮಣಿಸಿ, ಬಳಿಕ ಸೆಮಿಫೈನಲ್‌ನಲ್ಲಿ ಡಿಸಿ ಇಲೆವೆನ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಪೌರಕಾರ್ಮಿಕರ ತಂಡವು ಪತ್ರಕರ್ತರ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಆಲ್‌ರೌಂಡರ್ ಪ್ರಶಸ್ತಿಯನ್ನು ಪೌರಕಾರ್ಮಿಕರ ತಂಡದ ನಾಗಾರ್ಜುನ ಮತ್ತು ಉತ್ತಮ ದಾಂಡಿಗ ಪ್ರಶಸ್ತಿಯನ್ನು ಪತ್ರಕರ್ತರ ತಂಡದ ಪ್ರತೀಶ್ ಪಡೆದುಕೊಂಡರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ನಗರಸಭೆ ಪೌರಾಯುಕ್ತ ರಾಯಪ್ಪ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬೈಕ್ ರ್ಯಾಲಿಗೆ ಚಾಲನೆ: ಬೆಳಗ್ಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಬೈಕ್ ರ್ಯಾಲಿಗೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರತಿಜ್ಞಾ ವಿಧಿ ಬೋಧೊಸಿದರು. ಅಜ್ಜರಕಾಡು ಕ್ರೀಡಾಂಗಣದಿಂದ ಆರಂಭಗೊಂಡ ಬೈಕ್ ರ್ಯಾಲಿಯು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಬೀಡಿನ ಗುಡ್ಡೆ ಮೈದಾನದಲ್ಲಿ ಸಮಾಪ್ತಿಗೊಂಡಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಎಸ್ ಟಿ, ಪೌರಾಯುಕ್ತ ರಾಯಪ್ಪ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!