ಹಿರಿಯ ಕಾಂಗ್ರೆಸಿಗ ಕಮಲನಾಥ್ ಬಿಜೆಪಿ ಸೇರ್ಪಡೆಗೆ ದಿನಾಂಕ ನಿಗದಿ?

ಭೂಪಾಲ್: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಧ್ಯಪ್ರದೇಶಕ್ಕೆ ಪ್ರವೇಶಿಸುವ ಆರು ದಿನಗಳ ಮೊದಲು, ಕಾಂಗ್ರೆಸ್ ಹಿರಿಯ ಕಮಲ್ ನಾಥ್ ಮತ್ತು ಅವರ ಪುತ್ರ ಹಾಗೂ ಛಿಂದ್ವಾರಾ ಸಂಸದ ನಕುಲ್ ನಾಥ್ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಫೆ. 22 ರಂದು ರಾಹುಲ್ ಯಾತ್ರೆಯು ಡಾಟಿಯಾ ಜಿಲ್ಲೆಯಿಂದ ಮದ್ಯಪ್ರದೇಶ ಪ್ರವೇಶಿಸುವ ಮೊದಲು ಕಮಲ್ ನಾಥ್ ಅಥವಾ ಅವರ ಪುತ್ರ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ. ರಾಜ್ಯ ಸಭೆ ಚುನಾವಣೆಗೆ ತಮ್ಮನ್ನು ಅಭ್ಯರ್ಥಿಯಾಗಿ ಪರಿಗಣಿಸಲಿಲ್ಲ, ಜೊತೆಗೆ ಅಭ್ಯರ್ಥಿ ಆಯ್ಕೆ ಮಾಡುವಾಗ ತಮ್ಮ ಜೊತೆ ಸಮಾಲೋಚಿಸಿದೆ ಗ್ವಾಲಿಯರ್-ಚಂಬಲ್ ಕ್ಷೇತ್ರದ ರಾಜಕಾರಣಿ ಅಶೋಕ್ ಸಿಂಗ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಕಮಲ್ ನಾಥ್ ಮುನಿಸಿಗೆ ಕಾರಣವಾಗಿದೆ.

ಇದೆಲ್ಲಾ ಊಹಾಪೋಹಗಳ ನಡುವೆ, ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಮಾತನಾಡಿ, ಕಮಲ್ ನಾಥ್ ಅವರಿಗೆ ಅಭಿವೃದ್ಧಿಯಲ್ಲಿ ನಿಜವಾಗಿಯೂ ನಂಬಿಕೆ ಇದ್ದರೆ, ಅವರು ಭಗವಾನ್ ರಾಮನ ಹೆಸರನ್ನು ತೆಗೆದು ಕೊಂಡು ಬಿಜೆಪಿ ಸೇರಬೇಕು ಎಂದು ಹೇಳಿದ್ದಾರೆ.

ಇದರ ನಡುವೆ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ಮಾತನಾಡಿ ಅಯೋಧ್ಯೆಯಲ್ಲಿ ಜನವರಿ 22ರಂದು ನಡೆದ ರಾಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಿದ ಪಕ್ಷದ ಬಳಿಕ ಹಲವು ನಾಯಕರಿಗೆ ತೀವ್ರ ನೋವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಬಾಗಿಲನ್ನು ತೆರೆದಿದೆ ಎಂದು ಸ್ಪಷ್ಟಪಡಿಸಿದ್ದರು.

ತಾತ್ವಿಕವಾಗಿ ನಮ್ಮ ಸಿದ್ಧಾಂತ ಹಾಗೂ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದುವರಿಯಲು ಇಚ್ಛೆ ಇರುವ ಎಲ್ಲರಿಗೂ ಪಕ್ಷದ ಬಾಗಿಲು ತೆರೆದಿದೆ ಎಂದು ಅವರು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈ ಸುದ್ದಿಯನ್ನು ನಿರಾಕರಿಸಿದೆ.

Leave a Reply

Your email address will not be published. Required fields are marked *

error: Content is protected !!