‘ಭಾರತದ ನಾವಿಕರ ಬಿಡುಗಡೆಗೆ ಮೋದಿ ಅಲ್ಲ.. ಶಾರುಖ್ ಕಾರಣ’- ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ!

ನವದೆಹಲಿ: ಬೇಹುಗಾರಿಕೆ ಆರೋಪದಡಿಯಲ್ಲಿ ಕತಾರ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ‘ಭಾರತದ ಮಾಜಿ ನಾವಿಕರ ರಕ್ಷಣೆಗೆ ಪ್ರಧಾನಿ ಮೋದಿ ಅಲ್ಲ.. ಶಾರುಖ್ ಖಾನ್ ಕಾರಣ’ ಎಂದು ಹೇಳುವ ಮೂಲಕ ಮತ್ತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.

ಬೇಹಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಮರಣ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾ ಪಡೆಯ ಮಾಜಿ ಯೋಧರನ್ನು ಭಾರತಕ್ಕೆ ವಾಪಸ್ ಕರೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಪ್ರಧಾನಿ ಮೋದಿ ಅವರು ವೈಯಕ್ತಿಕ ವರ್ಚಸ್ಸಿನಿಂದಾಗಿಯೇ ಮಾಜಿ ಯೋಧರನ್ನು ರಕ್ಷಿಸಲು ಸಾಧ್ಯವಾಯಿತು ಹೇಳಲಾಗುತ್ತಿದೆ. ಆದರೆ, ಬಿಜೆಪಿಯ ಹಿರಿಯ ನಾಯಕ ಹಾಗೂ ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿ ಅವರ ಕಡು ಟೀಕಾಕಾರರಾಗಿ ಬದಲಾಗಿರುವ ಸುಬ್ರಮಣಿಯನ್ ಸ್ವಾಮಿ ಮಾತ್ರ ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಕಾಲೆಳೆದಿದ್ದಾರೆ.

ಮಾತ್ರವಲ್ಲದೇ ಮಾಜಿ ನಾವಿಕರ ಬಿಡುಗಡೆಗೆ ಶಾರುಖ್ ಖಾನ್ ನಟ ಶಾರುಕ್ ಖಾನ್ ಅವರ ಮಧ್ಯಸ್ಥಿಕೆಯಿಂದಾಗಿ ಮಾಜಿ ಯೋಧರ ಬಿಡುಗಡೆಯಾಗಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಯುಎಇ ಮತ್ತು ಕತಾರ್‌ ಭೇಟಿಯ ಕುರಿತು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದರು. ‘ಮುಂದಿನ ಎರಡು ದಿನಗಳಲ್ಲಿ, ನಾನು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯುಎಇ ಮತ್ತು ಕತಾರ್‌ಗೆ ಭೇಟಿ ನೀಡಲಿದ್ದೇನೆ, ಇದು ಈ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಗಾಢಗೊಳಿಸುತ್ತದೆ. ನಾನು ಅಧಿಕಾರ ವಹಿಸಿಕೊಂಡ ಯುಎಇಗೆ ಭೇಟಿಯು ನನ್ನ 7ನೆಯ ಭೇಟಿಯಾಗಿದೆ. ಇದು ಬಲವಾದ ಭಾರತ-ಯುಎಇ ಸ್ನೇಹಕ್ಕೆ ನಾವು ನೀಡುವ ಆದ್ಯತೆಯನ್ನು ಸೂಚಿಸುತ್ತದೆ.

ನನ್ನ ಸಹೋದರ ಮೊಹಮ್ಮದ್ ಬಿನ್ ಝಾಯೇದ್ ಅವರನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೇನೆ. ಯುಎಇಯಲ್ಲಿ ಮೊದಲ ಹಿಂದೂ ಮಂದಿರವನ್ನು ಉದ್ಘಾಟಿಸುವ ಗೌರವ ನನಗೆ ದೊರೆತಿದೆ. ಅಬುಧಾಬಿಯಲ್ಲಿ ನಡೆಯುವ ಸಮುದಾಯ ಕಾರ್ಯಕ್ರಮದಲ್ಲಿ ನಾನು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತೇನೆ. ಬಳಿಕ ಕತಾರ್‌ ಭೇಟಿ ನೀಡಲಿದ್ದೇನೆ. ನಾನು ತಮಿಮ್ ಬಿನ್ ಹಮದ್ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಅವರ ನಾಯಕತ್ವದಲ್ಲಿ ಕತಾರ್ ಅಪಾರ ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ.

ಈ ಟ್ವೀಟ್‌ಗೆ ರಿಪ್ಲೈ ಮಾಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ‘ಕತಾರ್‌ನ ಶೇಖ್‌ಗಳನ್ನು ಮನವೊಲಿಸಲು ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ವಿಫಲವಾದ ನಂತರ ಮೋದಿ ಅವರು ಸಿನಿಮಾ ತಾರೆ ಶಾರುಕ್ ಖಾನ್ ಅವರಿಗೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡರು. ಹೀಗಾಗಿ, ನಮ್ಮ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡಲು ಕತಾರ್ ಶೇಖ್‌ಗಳೊಂದಿಗೆ ದುಬಾರಿ ಒಪ್ಪಂದವನ್ನು ಕುದುರಿಸಿಕೊಂಡರು’ ಎಂದು ಟೀಕಿಸಿದ್ದಾರೆ.

ಕತಾರ್ ನಿಂದ ಭಾರತದ ಮಾಜಿ ನಾವಿಕರ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ: ನಟ ಶಾರುಖ್ ಖಾನ್ ಸ್ಪಷ್ಟನೆ

ಮುಂಬೈ: ಬೇಹುಗಾರಿಕೆ ಆರೋಪದಲ್ಲಿ ಕತಾರ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತದ ಮಾಜಿ ನಾವಿಕರ ಬಿಡುಗಡೆಯಲ್ಲಿ ನನ್ನ ಯಾವುದೇ ರೀತಿಯ ಪಾತ್ರವಿಲ್ಲ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮಾಡಿದ್ದ ಟ್ವೀಟ್ ವ್ಯಾಪಕ ವೈರಲ್ ಆಗುತ್ತಿರುವ ಬೆನ್ನಲ್ಲೇ ಶಾರುಖ್ ಖಾನ್ ಅವರ ಕಚೇರಿಯು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಕತಾರ್‌ನಿಂದ ಎಂಟು ನೌಕಾಪಡೆಯ ಪುರುಷರ ಬಿಡುಗಡೆಗೆ ಸಹಾಯ ಮಾಡುವಲ್ಲಿ ಶಾರುಖ್ ಖಾನ್ ಅವರ ಯಾವುದೇ ಪಾಲ್ಗೊಳ್ಳುವಿಕೆ ಇಲ್ಲ ಎಂದು ಹೇಳಿದೆ.

“ಕತಾರ್‌ನಿಂದ ಭಾರತದ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಉದ್ದೇಶಿತ ಪಾತ್ರದ ಕುರಿತಾದ ವರದಿಗಳ ಬಗ್ಗೆ, ನಟ ಶಾರುಖ್ ಖಾನ್ ಅವರ ಕಚೇರಿಯು ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ ಎಂದು ಹೇಳಿದೆ. ಈ ಯಶಸ್ವಿ ನಿರ್ಣಯದ ಕಾರ್ಯಗತಗೊಳಿಸುವಿಕೆಯು ಕೇವಲ ಭಾರತ ಸರ್ಕಾರದ ಅಧಿಕಾರಿಗಳ ಮೇಲೆ ಮಾತ್ರ ನಿಂತಿದೆ ಮತ್ತು ಈ ವಿಷಯದಲ್ಲಿ ಶಾರುಖ್ ಖಾನ್ ಅವರ ಭಾಗವಹಿಸುವಿಕೆಯನ್ನು ನಾವು ನಿಸ್ಸಂದಿಗ್ಧವಾಗಿ ನಿರಾಕರಿಸುತ್ತೇವೆ ಎಂದು ಹೇಳಿದೆ.

ಅಲ್ಲದೆ, ‘ರಾಜತಾಂತ್ರಿಕತೆ ಮತ್ತು ರಾಜ್ಯಕಾರ್ಯವನ್ನು ಒಳಗೊಂಡಿರುವ ಎಲ್ಲಾ ವಿಷಯಗಳನ್ನು ನಮ್ಮ ಅತ್ಯಂತ ಸಮರ್ಥ ನಾಯಕರು ಉತ್ತಮವಾಗಿ ನಿರ್ವಹಿಸುತ್ತಾರೆ. ಇತರ ಅನೇಕ ಭಾರತೀಯರಂತೆ ಶಾರುಖ್ ಖಾನ್ ಅವರು ನೌಕಾಪಡೆಯ ಅಧಿಕಾರಿಗಳು ಮನೆಯಲ್ಲಿ ಸುರಕ್ಷಿತವಾಗಿರುವುದಕ್ಕೆ ಸಂತೋಷಪಡುತ್ತಾರೆ ಮತ್ತು ಅವರಿಗೆ ಶುಭ ಹಾರೈಸುತ್ತಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಕತಾರ್ ಜೈಲಿನಿಂದ ಎಂಟು ಭಾರತೀಯ ನೌಕಾಪಡೆಯ ಯೋಧರನ್ನು ಬಿಡುಗಡೆ ಮಾಡುವಲ್ಲಿ ಬಾಲಿವುಡ್ ತಾರೆಯೇ ಹೊರತು ಭಾರತ ಸರ್ಕಾರವಲ್ಲ ಎಂದು ಆರೋಪಿಸಿ ಅನುಭವಿ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದರು. 

ಪ್ರಧಾನಿ ನರೇಂದ್ರ ಮೋದಿ ಅವರ ಕತಾರ್ ಪ್ರವಾಸದ ಕುರಿತ ಟ್ವೀಟ್ ಗೆ ರಿಪ್ಲೈ ಮಾಡಿದ್ದ ಸ್ವಾಮಿ,  ‘ಕತಾರ್‌ನ ಶೇಖ್‌ಗಳನ್ನು ಮನವೊಲಿಸಲು ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ವಿಫಲವಾದ ನಂತರ ಮೋದಿ ಅವರು ಸಿನಿಮಾ ತಾರೆ ಶಾರುಕ್ ಖಾನ್ ಅವರಿಗೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡರು. ಹೀಗಾಗಿ, ನಮ್ಮ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡಲು ಕತಾರ್ ಶೇಖ್‌ಗಳೊಂದಿಗೆ ದುಬಾರಿ ಒಪ್ಪಂದವನ್ನು ಕುದುರಿಸಿಕೊಂಡರು’ ಎಂದು ಟೀಕಿಸಿದ್ದಾರೆ.

ಈ ಹಿಂದೆ ಕತಾರ್ ನಲ್ಲಿ ನಡೆದ ಎಎಫ್‌ಸಿ ಫುಟ್ಬಾಲ್ ಟೂರ್ನಿಯ ಫೈನಲ್‌ ಪಂದ್ಯದ ವಿಶೇಷ ಅತಿಥಿಯಾಗಿದ್ದ ಶಾರುಖ್ ಖಾನ್ ಕತಾರ್ ಗೆ ತೆರಳಿದ್ದರು. ದೋಹಾದಲ್ಲಿ ಅವರನ್ನು ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರು ಸ್ವಾಗತಿಸಿದ್ದರು.

Leave a Reply

Your email address will not be published. Required fields are marked *

error: Content is protected !!