ಜೆರೋಸಾ ಶಾಲೆಯಲ್ಲಿ ಹಿಂದೂ ಧರ್ಮದ ಅವಹೇಳನ- ಸೂಕ್ತ ತನಿಖೆಗೆ ಮಹಿಳಾ ಮೋರ್ಚಾ ಆಗ್ರಹ

ಮಂಗಳೂರು: ಜೆರೋಸಾ ಶಾಲೆಯಲ್ಲಿ ಶ್ರೀರಾಮ, ಹಿಂದೂ ಧರ್ಮ, ಹಾಗೂ ಪ್ರಧಾನಿ ಮೋದಿಯವರನ್ನು ಅವಹೇಳನ ಮಾಡಿದ ಶಿಕ್ಷಕಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣದ ಮಹಿಳಾ ಮೋರ್ಚಾ ವತಿಯಿಂದ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಏಳನೇ ತರಗತಿಗೆ “Work is worship” ಎನ್ನುವ ಪಾಠ ಮಾಡುವ ಸಂದರ್ಭದಲ್ಲಿ ಅಗತ್ಯವೇ ಇಲ್ಲದಿದ್ದರೂ ಶಿಕ್ಷಕಿ ಸಿಸ್ಟರ್ ಪ್ರಭಾ ಎನ್ನುವವರು ಹಿಂದೂ ಮಕ್ಕಳನ್ನು ಉದ್ದೇಶಿಸಿ, “ಹಿಂದೂ ಧರ್ಮಕ್ಕೆ ಅಸ್ತಿತ್ವವೇ ಇಲ್ಲ, ಬಾಬರಿ ಮಸೀದಿ ಕೆಡವಿ ಮಂದಿರ ಕಟ್ಟಿ ಕಲ್ಲಿಗೆ ಅಲಂಕಾರ ಮಾಡಿ ಇಟ್ಟರೆ ಅದು ದೇವರಾ?, ನಾಗ ದೇವರಲ್ಲ ಅದು ಒಂದು ಹಾವು ಅಷ್ಟೇ. ಅದು ದೇವರಾಗಲು ಹೇಗೆ ಸಾಧ್ಯ? ಕಲ್ಲಿಗೆ ಹಾಲು ಹಾಕಿದರೆ ವೇಸ್ಟ್. ನಾನು ಎಷ್ಟೋ ನಾಗನನ್ನು ಸಾಯಿಸಿದ್ದೇನೆ. ನಿಮ್ಮ ಯಾವ ನಾಗ ದೇವನೂ ನನಗೇನೂ ಮಾಡಿಲ್ಲ, ರಾಮಾಯಣ ಮಹಾಭಾರತವೆಲ್ಲಾ ನಿಜವಲ್ಲ ಯಾರೋ ಬರೆದ ಕಟ್ಟು ಕಥೆ, ಗಣಪತಿಗೆ ಅಷ್ಟು ದೊಡ್ಡ ಹೊಟ್ಟೆ ಯಾಕೆ? ಅದೆಷ್ಟು ತಿಂತಾನೆ ಅವ?, ನೀವು ಕುತ್ತಿಗೆಗೆ ದೇವರ ಫೋಟೋ ಹಾಕಿಕೊಳ್ಳುವುದು ಯಾಕೆ? ಕಿತ್ತು ಬಿಸಾಕಿ ಅದನ್ನು, ನಿಮ್ಮ ಮೋದಿ ಗುಜರಾತಿನಲ್ಲಿ ಮುಸ್ಲಿಮರನ್ನು ಕೊಂದವನು, ಹಿಂದೂಗಳು ಮುಸ್ಲಿಂ ಹುಡುಗಿಯರನ್ನು ಅತ್ಯಾಚಾರ ಮಾಡಿದವರು” ಎಂಬ ಮುಂತಾದ ಅವಹೇಳನಕಾರಿ ಮಾತುಗಳನ್ನು ಆಡಿದ ಬಗ್ಗೆ ಮಕ್ಕಳು ತಮ್ಮ ಪೋಷಕರಲ್ಲಿ ತಿಳಿಸಿದ್ದಾರೆ.

ಪೋಷಕರು ಈ ಬಗ್ಗೆ ಬೇರೆಯವರಲ್ಲಿ ವಿಚಾರಿಸಲಾಗಿ ಆ ಮಕ್ಕಳೂ ಸಹ ತಮಗೆ ಇಂತಹ ಕೆಟ್ಟ ಅನುಭವವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಮಕ್ಕಳಲ್ಲಿ ಧಾರ್ಮಿಕ ನಂಬಿಕೆಗಳ ಬಗ್ಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು ಮತಾಂತರದ ಹುನ್ನಾರವೂ ಆಗಿರಬಹುದಾದ ಸಾಧ್ಯತೆಗಳ ಬಗ್ಗೆ ಹಲವಾರು ಪೋಷಕರು ಸಹಜವಾಗಿ ಆತಂಕಗೊಂಡಿದ್ದಾರೆ.

ಈ ಬಗ್ಗೆ ಪೋಷಕರು ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಸಹ ಜವಾಬ್ದಾರಿ ಸ್ಥಾನದಲ್ಲಿರುವವರು ಯಾವುದೇ ವಿಚಾರಣೆ ನಡೆಸದೇ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಿ ಸಮಜಾಯಿಸಿ ನೀಡಿದ ಕಾರಣ ಅನಿವಾರ್ಯವಾಗಿ ಪೋಷಕರು ಪ್ರಕರಣವನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ಅವರ ಗಮನಕ್ಕೆ ತಂದು ನ್ಯಾಯಕ್ಕಾಗಿ ಮನವಿ ಮಾಡಿದ ಮೇರೆಗೆ ಶಾಸಕರು ಕ್ಷೇತ್ರದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಶಾಲೆಯ ಆಡಳಿತ ಮಂಡಳಿಗೆ ಭೇಟಿ ನೀಡಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ ಪರಿಣಾಮ ಸದರಿ ಶಿಕ್ಷಕಿಯನ್ನು ವಜಾಗೊಳಿಸಿ ತನಿಖೆಗೆ ಆದೇಶಿಸಲಾಗಿತ್ತು.

ಆದರೆ ತನಿಖೆಯ ಆರಂಭಕ್ಕೂ ಮುನ್ನ ರಾಜಕೀಯ ಪ್ರೇರಿತವಾಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನೇ ವರ್ಗಾವಣೆ ಮಾಡಿರುವುದನ್ನು ನೋಡಿದರೆ ಇದರ ಹಿಂದೆ ಭಾರೀ ಷಡ್ಯಂತ್ರವೇ ಅಡಗಿರುವುದು ಸ್ಪಷ್ಟವಾಗುತ್ತಿದೆ ಮತ್ತು ತನಿಖೆಯು ಪಾರದರ್ಶಕವಾಗಿ ನಡೆಯುವ ಬಗ್ಗೆ ಸಂಶಯವಿದೆ.

ಸ್ವತಃ ಮಕ್ಕಳೇ ರಾಜ್ಯ ಮಾತ್ರವಲ್ಲದೇ ದೇಶದ ಮಾಧ್ಯಮಗಳ ಮುಂದೆಯೇ ತಮಗಾದ ನೋವುಗಳ ಬಗ್ಗೆ ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಅಷ್ಟಾಗಿಯೂ ಆ ಮಕ್ಕಳೇ ಸುಳ್ಳು ಹೇಳುತ್ತಿದ್ದಾರೆ ಎಂಬಂತೆ ಬಿಂಬಿಸಿ ಶಾಲೆಯ ಆಡಳಿತ ಮಂಡಳಿ ಆರೋಪಿಗಳನ್ನು ರಕ್ಷಿಸುವ ಕೆಲಸದಲ್ಲಿ ನಿರತವಾಗಿದೆ.

ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ಸಮಾಜದ ಸ್ವಾಸ್ಥ್ಯ ಕದಡಲು ಕಾರಣವಾಗಿರುವ ಸಿಸ್ಟರ್ ಪ್ರಭಾ ಹಾಗೂ ಇಂತಹ ಕೃತ್ಯದಲ್ಲಿ ತೊಡಗಿರುವ ಈ ಸಂಸ್ಥೆಯ ಇತರ ಶಿಕ್ಷಕರ ಮೇಲೆ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ, ಮಕ್ಕಳಲ್ಲಿ ಧರ್ಮಗಳ ನಡುವೆ ದ್ವೇಷ ಭಾವನೆ, ಕೋಮು ಸೌಹಾರ್ದತೆಗೆ ಧಕ್ಕೆ, ಶಾಂತಿ ಭಂಗ, ದೇಶದ ಗೌರವಾನ್ವಿತ ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿದ ಆರೋಪದ ಮೇರೆಗೆ ಗಂಭೀರ ಪ್ರಕರಣಗಳಡಿಯಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡುವಂತೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮ.ನ.ಪಾ ಸದಸ್ಯರಾದ ಪೂರ್ಣಿಮಾ, ಶಕೀಲಾ ಖಾವಾ, ಲೀಲಾವತಿ ಪ್ರಕಾಶ್, ವೀಣಾ ಮಂಗಳ, ಭಾನುಮತಿ, ಶೋಭಾ, ರೂಪಶ್ರೀ, ಕಾವ್ಯ ನಟರಾಜ್, ಚಂದ್ರಾವತಿ, ಮಹಿಳಾ ಮೋರ್ಚಾದ ಪೂರ್ಣಿಮಾ ರಾವ್, ಹರಿಣಿ, ಗೀತಾ, ಜ್ಯೋತಿ, ಸವಿತ, ರೇವತಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!