ಆಪರೇಷನ್ ಥಿಯೇಟರ್ಗೂ ವಕ್ಕರಿಸಿದ ಪ್ರೀ ವೆಡ್ಡಿಂಗ್ ಶೂಟ್- ವೈದ್ಯನನ್ನು ಮನೆಗ ಕಳುಹಿಸಿದ ಸಚಿವರು!
ಬೆಂಗಳೂರು : ಚಿತ್ರದುರ್ಗದ ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ನಡೆಸಿದ ವೈದ್ಯರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಚಿತ್ರದುರ್ಗದ ಭರಮಸಾಗರ ಸರ್ಕಾರಿ ಆಸ್ಪತ್ರೆಯ ಗುತ್ತಿಗೆ ವೈದ್ಯರೋರ್ವರು ತಮ್ಮ ಭಾವೀ ಪತ್ನಿಯ ಜೊತೆ ಆಪರೇಷನ್ ಥಿಯೇಟರ್ ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದರು. ವೈರಲ್ ಆಗಿದ್ದ ವೀಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣ x ನಲ್ಲಿ ಪೋಸ್ಟ್ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್, “ಸರ್ಕಾರಿ ಆಸ್ಪತ್ರೆಗಳಿರುವುದು ಜನರ ಆರೋಗ್ಯ ಸೇವೆಗೆ ಹೊರತು ವೈಯಕ್ತಿಕ ಕೆಲಸಗಳಿಗಲ್ಲ” ಎಂದಿರುವ ಅವರು, ವೈದ್ಯರಿಂದ ಇಂಥಹ ಅಶಿಸ್ತುಗಳನ್ನ ನಾನು ಸಹಿಸುವುದಿಲ್ಲ, ಎಂದು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಗುತ್ತಿಗೆ ನೌಕರರು ಸೇರಿದಂತೆ ವೈದ್ಯರು, ಸಿಬ್ಬಂದಿ ವರ್ಗದವರು ಸರ್ಕಾರಿ ಸೇವಾ ನಿಯಮಾವಳಿಗಳ ಅನ್ವಯ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ದುರುಪಯೋಗಳು ಆಗದಂತೆ ಎಚ್ಚರಿಕೆ ವಹಿಸಲು ಸಂಬಂಧಪಟ್ಟ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಒದಗಿಸಿರುವ ಸೌಕರ್ಯಗಳು ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಎಂಬುದನ್ನು ಅರಿತು ಕರ್ತವ್ಯ ನಿರ್ವಹಿಸುವತ್ತ ಎಲ್ಲರು ಗಮನಹರಿಸಬೇಕು ಎಂದು ಹೇಳಿದ್ದಾರೆ.