‘ಹಿಂದೂಗಳ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಲಿ’: ಶಾಸಕ ಹರೀಶ್ ಪೂಂಜಾ ಪೋಸ್ಟ್!

ದಕ್ಷಿಣ ಕನ್ನಡ: ಕೇಂದ್ರದ ಮೋದಿ ಸರ್ಕಾರದ ವಿರುದ್ಧದ ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ‘ನನ್ನ ತೆರಿಗೆ… ನನ್ನ ಹಕ್ಕು’ ವಿಚಾರ ಹಸಿರಾಗಿರುವಂತೆಯೇ ಇತ್ತ ರಾಜ್ಯದ ಬಿಜೆಪಿ ಶಾಸಕರೊಬ್ಬರು ಹಿಂದೂಗಳ ತೆರಿಗೆ.. ಹಿಂದೂಗಳ ಹಕ್ಕು ಎಂಬ ಹೊಸ ವಾದದ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಹಿಂದೂಗಳ ಹಣ ಹಿಂದೂ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಹಿಂದೂಗಳು ಕಟ್ಟಿದ ತೆರಿಗೆ ಹಣ ಇತರ ಧರ್ಮದ ಜನರಿಗೆ ಸೇರುವುದು ಅನ್ಯಾಯ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್​ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 

ಈ ಆರ್ಥಿಕ ವರ್ಷದಿಂದ ಹಿಂದುಗಳು ಕಟ್ಟಿರುವ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಉಪಯೋಗ ಆಗಬೇಕು. ಹಿಂದುಗಳು ಕಟ್ಟಿದ ತೆರಿಗೆ ಹಣ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದುಗಳಿಗೆ ಆಗುವ ಅನ್ಯಾಯ. ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು. ದೇಶದಲ್ಲಿರುವ ತೆರಿಗೆ ಸಂಗ್ರಹಣದಲ್ಲಿ ಹಿಂದೂಗಳ ಪಾಲು ಎಷ್ಟು? ಇದರಲ್ಲಿ ಹಿಂದೂಗಳ ಅಭಿವೃದ್ಧಿಗೆ ಉಪಯೋಗವಾಗುತ್ತಿರುವುದು ಎಷ್ಟು? ಹಿಂದೂಗಳ ತೆರಿಗೆ ಹಿಂದುಗಳಿಗೆ ಸಲ್ಲಬೇಕು’ ಎಂದು ಹರೀಶ್ ಪೂಂಜಾ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ಸಮರ್ಥಿಸಿಕೊಂಡ ಶಾಸಕ: ಇನ್ನು ಮಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪೂಂಜಾ ತಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಂಡರು. ‘ಹಿಂದೂಗಳ ತೆರಿಗೆ ಹಣವನ್ನು ಹಿಂದೂಗಳ ಅಭಿವೃದ್ಧಿಗೆ ವಿನಿಯೋಗಿಸಲು ಕೇಳುವುದರಲ್ಲಿ ತಪ್ಪೇನಿದೆ. ಡಿ ಕೆ ಸುರೇಶ್ (ಕಾಂಗ್ರೆಸ್ ಸಂಸದ) ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಕಾಂಗ್ರೆಸ್ ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಪ್ರತಿಯೊಬ್ಬ ಹಿಂದೂಗಳ ಹೆಸರಿನಲ್ಲಿ ಧರ್ಮವನ್ನು ನಮೂದಿಸಿರುವುದರಿಂದ ಹಿಂದೂಗಳ ತೆರಿಗೆ ಹಣವನ್ನು ಲೆಕ್ಕಾಚಾರ ಮಾಡುವುದು ಕಷ್ಟವೇನಲ್ಲ. ತೆರಿಗೆ ವಿಷಯ ಒಂದು ಸಣ್ಣ ವಿಷಯ. ಆದರೆ ಕಾಂಗ್ರೆಸ್ ಈ ವಿಷಯವನ್ನು ಬಳಸಿಕೊಂಡು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ’ ಎಂದರು.

ಕಾಂಗ್ರೆಸ್ ಖಂಡನೆ
ಶಾಸಕ ಹರೀಶ್ ಪೂಂಜಾ ಪೋಸ್ಟ್​ಗೆ ವ್ಯಾಪಕ‌ ಖಂಡನೆ ವ್ಯಕ್ತವಾಗುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಇದು ಮೂರ್ಖತನದ ಪರಮಾವಧಿ. ನಮ್ಮ ದೇಶದ ಸಂವಿಧಾನ ಬೆಳ್ತಂಗಡಿ ಶಾಸಕರಿಗೆ ಗೊತ್ತಿಲ್ಲಾ ಅನಿಸುತ್ತೆ. ಶಾಸಕರಾಗೋಕೆ ಅವರು ಅರ್ಹರಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!