ಬ್ಯಾಸ್ಕೆಟ್‌ಬಾಲ್‌ಗೆ ಉತ್ತೇಜನ: ಮಾಹೆ- ಬಿಎಫ್‌ಐ ಪಾಲುದಾರಿಕೆಗೆ ಸಹಿ

ಮಣಿಪಾಲ ಫೆ.9: ಭಾರತೀಯ ಬ್ಯಾಸ್ಕೆಟ್‌ ಬಾಲ್‌ ನ್ನು ಉತ್ತೇಜಿಸುವ ಉದ್ದೇಶದಿಂದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಬಾಸ್ಕೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಪಾಲುದಾರಿಕೆಗೆ ಸಹಿ ಹಾಕಿದೆ.

ಈ ವಿಚಾರವಾಗಿ ಮಾಹಿತಿ ನೀಡಿದ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು, ಮಾಹೆ ಮತ್ತು ಬಿಎಫ್‌ಐ ನಡುವಿನ ಈ ಒಪ್ಪಂದವು ಭಾರತೀಯ ಬ್ಯಾಸ್ಕೆಟ್ ಬಾಲ್ ಕ್ಷೇತ್ರದಲ್ಲಿ ಪ್ರಮುಖ ಮೈಲುಗಲ್ಲು ಆಗಿದೆ. ಮಾಹೆ ಮತ್ತು ಬಿಎಫ್‌ಐ ನ ಸಂಯೋಜಿತ ಪರಿಣತಿ ಮತ್ತು ಸಂಪನ್ಮೂಲಗಳು ಕ್ರೀಡೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿದೆ. ಅಥ್ಲೀಟ್‌ಗಳಿಗೆ ಉನ್ನತ ದರ್ಜೆಯ ಸೌಲಭ್ಯಗಳು ಮತ್ತು ಯಶಸ್ಸಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಈ ವೇಳೆ ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ.ಶರತ್ ಕುಮಾರ್ ರಾವ್ ಅವರು ಮಾತನಾಡಿ, ಮಾಹೆ ಪಠ್ಯ ದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಕೂಡ ಸಾಕಷ್ಟು ಪ್ರಾಮುಖ್ಯತೆ ನೀಡುತ್ತದೆ. ಈ ಒಡಂಬಡಿಕೆಯೊಂದಿಗೆ ನಾವು ಭಾರತದಲ್ಲಿ ಬ್ಯಾಸ್ಕೆಟ್‌ಬಾಲ್ ಅಭಿವೃದ್ಧಿಯ ಪ್ರಗತಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸ ಬಹುದು. ನಮ್ಮ ವಿದ್ಯಾರ್ಥಿಗಳಿಗೆ ಬ್ಯಾಸ್ಕೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾದ ಸಹಾಯದಿಂದ ಅಂಕಣದಲ್ಲಿ ಮತ್ತು ಹೊರಗೆ ಯಶಸ್ವಿ ಕ್ರೀಡಾ ಪಟುಗಳಾಗಲು ಅವಕಾಶವನ್ನು ದೊರೆಯಲಿದೆ ಎಂದರು.

ಇನ್ನು ಇದೇ ವೇಳೆ ಬ್ಯಾಸ್ಕೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಆಧವ್ ಅರ್ಜುನ ಅವರು ಮಾತನಾಡಿ, ಈ ಪಾಲುದಾರಿಕೆಯೊಂದಿಗೆ ಕ್ರೀಡಾಪಟುಗಳಿಗೆ ಉನ್ನತ ದರ್ಜೆಯ ಸೌಲಭ್ಯಗಳು, ಜ್ಞಾನದ ತರಬೇತಿ ಮತ್ತು ಶೈಕ್ಷಣಿಕ ಬೆಂಬಲವನ್ನು ಒದಗಿಸುವ ಮೂಲಕ ಉತ್ತಮ ವಾತಾವರಣವನ್ನು ಸೃಷ್ಟಿಸಲಾಗುವುದು. ಬ್ಯಾಸ್ಕೆಟ್‌ಬಾಲ್ ಪ್ರತಿಭೆಯ ಮುಂದಿನ ಭವಿಷ್ಯವನ್ನು ಅಭಿವೃದ್ಧಿ ಪಡಿಸಲು ಮತ್ತು ಅವರಿಗೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಕುಲಸಚಿವ ಡಾ.ಗಿರಿಧರ್ ಕಿಣಿ, ಬಿಎಫ್‌ಐನ ಮುಖ್ಯ ಹಣಕಾಸು ಅಧಿಕಾರಿ ಶ್ಯಾಮ್ ಆದಿತ್ಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!