ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಪ್ರವೀಣ್ ಚೌಗುಲೆ ಪರೋಲ್ ಅರ್ಜಿ ತಿರಸ್ಕೃತ
ಉಡುಪಿ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಸಲ್ಲಿಸಿರುವ ಪರೋಲ್ ಅರ್ಜಿಯನ್ನು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ ತಿರಸ್ಕರಿಸಿ ಇಂದು ಆದೇಶ ನೀಡಿದೆ.
ಫೆ.1ರಂದು ನಿಧನರಾದ ತನ್ನ ಸಹೋದರ ನಿತೀನ್ ಅವರ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಮೂರು ತಾಸು ಭಾಗವಹಿಸಲು ತನ್ನ ಊರಾದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಗೆ ತೆರಳಲು ಪರೋಲ್ ಮಂಜೂರು ಮಾಡುವಂತೆ ನ್ಯಾಯಾಲಯಕ್ಕೆ ಫೆ.8ರಂದು ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಇದಕ್ಕೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ. ನದಾಫ್ ಆಕ್ಷೇಪಣೆ ಸಲ್ಲಿಸಿದ್ದು, ಆರೋಪಿಗೆ ಪರೋಲ್ ನೀಡಿದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಅಲ್ಲದೆ ಆರೋಪಿಯ ಮೇಲೆ ದಾಳಿಯಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಆರೋಪಿ ತನ್ನ ಸಹೋದರ ಮೃತಪಟ್ಟ ಬಗ್ಗೆ ಯಾವುದೇ ಮರಣ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸದೆ ಇರುವುದರಿಂದ ಆತನಿಗೆ ಪರೋಲ್ ನೀಡಬಾರದು ಎಂದು ವಾದ ಮಂಡಿಸಿದರು.
ಈ ಕುರಿತು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶೆ ದೀಪಾ, ಆರೋಪಿಯ ಪರೋಲ್ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದರು. ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ. ನದಾಫ್ ಹಾಜರಿದ್ದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ಶೀಟ್ನ್ನು ಪ್ರಕರಣದ ತನಿಖಾಧಿಕಾರಿಗಳು ಕೊನೆಯ ದಿನವಾದ ಫೆ.12ರಂದು ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾ ರೆಂದು ಮೂಲಗಳು ತಿಳಿಸಿವೆ. ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಪೊಲೀಸರ ಕೈಸೇರಿದೆ.